ಬೈಂದೂರು: ಬೈಂದೂರಿನ ಗ್ರಾಮೀಣ ಭಾಗದಲ್ಲಿ ಹಣಬಲ, ಅಧಿಕಾರ, ದಬ್ಬಾಳಿಕೆ ಮತ್ತು ನಕಲಿ ದಾಖಲೆ ಮೂಲಕ ಭೂಕಬಳಿಕೆ, ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಕೆಲವು ವ್ಯಕ್ತಿಗಳು ಕಾನೂನಿನ ದುರ್ಬಳಕೆ ಮಾಡಕೊಂಡು ವಂಚಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಸುಮ್ಮನಿರಲ್ಲ ಎಂದು ಬೈಂದೂರು ಬಿಜೆಪಿಯ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಎಚ್ಚರಿಸಿದ್ದಾರೆ.
ಬೈಂದೂರಿನಲ್ಲಿ ಸೋಮವಾರ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಉಡುಪಿ ಜಿಲ್ಲೆಯ ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಪ್ರಮುಖವಾಗಿ ಗುರುತಿಸಿಕೊಂಡಿರುವ ಹೆಗ್ಗಳಿಕೆ ಬೈಂದೂರು ಕ್ಷೇತ್ರದ್ದಾಗಿದೆ. ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಸುಕುಮಾರ ಶೆಟ್ಟಿ ಅಧಿಕಾರಕ್ಕೆ ಬಂದ ಬಳಿಕ ಬೈಂದೂರು ಕ್ಷೇತ್ರ ಸರ್ವತೋಮುಖ ಅಭಿವೃದ್ಧಿ ಕಂಡಿದೆ ಮತ್ತು ದಾಖಲೆಯ ಅನುದಾನದ ಮೂಲಕ ಮಾದರಿ ಕ್ಷೇತ್ರವಾಗಿ ಮೂಡಿಬರುತ್ತಿದೆ.
ಸುಸಜ್ಜಿತ ತಾಲೂಕು ಕಚೇರಿ ಕಟ್ಟಡ, ಸೇರಿದಂತೆ ವಿವಿಧ ಮಹತ್ವಾಂಕ್ಷೆಯ ಯೋಜನೆಗಳು ನಿರ್ಮಾಣ ಹಂತದಲ್ಲಿದೆ, ಮಾತ್ರವಲ್ಲದೆ ಕ್ಷೇತ್ರದಲ್ಲಿ ಎಲ್ಲಾ ಇಲಾಖೆಗಳು ಪಾರದರ್ಶಕ ಸೇವೆ ಮೂಲಕ ಸಾರ್ವಜನಿಕರಿಗೆ ಸಮರ್ಪಕವಾಗಿ ಸೇವೆ ದೊರಕಿಸುವಲ್ಲಿ ಸರಕಾರ ಹಾಗೂ ಪಕ್ಷ ಪ್ರಮುಖ ಆದ್ಯತೆ ನೀಡುವಲ್ಲಿ ನಿಗಾ ವಹಿಸಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಬೈಂದೂರಿನಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ. ಇತ್ತೀಚೆಗೆ ವಿವಿಧ ಪತ್ರಿಕೆಗಳು ಹಾಗೂ ಸಾಮಾಜಿಕ ಚಾಲತಾಣಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದರು.
ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಕ್ಷೇತ್ರದ ಯಾವುದೇ ವ್ಯಕ್ತಿಯೂ ದಬ್ಬಾಳಿಕೆ, ವಂಚನೆಗಳಿಗೆ ಒಳಗಾಗಬಾರದು. ಜನಸಾಮಾನ್ಯರಿಗೆ ನಕಲಿ ದಾಖಲೆ ಅಥವಾ ಒತ್ತಡಗಳ ಮೂಲಕ ಒಕ್ಕಲೆಬ್ಬಿಸುವ ಪ್ರಯತ್ನ ನಡೆದರೆ ಅದನ್ನು ಸಹಿಸೋದಿಲ್ಲ. ಒಂದೊಮ್ಮೆ ಈ ರೀತಿಯ ಯಾವ ಅನ್ಯಾಯಗಳಾದರೆ ಜನರು ನೇರವಾಗಿ ದಾಖಲೆಗಳೊಂದಿಗೆ ಬಿಜೆಪಿಯ ಬೈಂದೂರು ಕಛೇರಿಯನ್ನು ಸಂಪರ್ಕಿಸಬಹುದು ಮತ್ತು ಅಂತವರಿಗೆ ಯಾವುದೇ ಖರ್ಚು ಭರಿಸದೆ ಉಚಿತವಾಗಿ ಕಾನೂನಿನ ನೆರವು ನೀಡಲಾಗುವುದು ಎಂದರು.
ಯಾವುದಾದರೂ ಇಲಾಖೆಗಳಿಂದ ತೊಂದರೆಗೊಳಗಾಗಿದ್ದರೆ ನೇರವಾಗಿ ಆ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಲಾಗುವುದು ಎಂದ ಅವರು, ಈ ಕುರಿತು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಈಗಾಗಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಕೂಡ ತಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ಭೂ ದಾಖಲೆ ಕುರಿತು ಸಮಸ್ಯೆಗಳಿವೆ, ಇದರ ಲಾಭ ಪಡೆಯಲು ಪ್ರಯತ್ನಿಸುವ ಹಾಗೂ ಸುಳ್ಳು ದಾಖಲೆ ಸೃಷ್ಟಿಸುವ ತಂಡದ ಬಗ್ಗೆ ಜನರು ಎಚ್ಚರಿಕೆಯ ಜೊತೆಗೆ ಮಾಹಿತಿ ನೀಡಬೇಕು ಎಂದು ದೀಪಕ್ ಕುಮಾರ್ ಶೆಟ್ಟಿ ತಿಳಿಸಿದರು.
PublicNext
22/08/2022 11:01 pm