ಉಡುಪಿ: ಉಡುಪಿಯಲ್ಲಿ ಹಡಿಲು ಬಿಟ್ಟ ಫಲವತ್ತಾದ ಕೃಷಿ ಭೂಮಿಗಳನ್ನು ಮತ್ತೆ ಕೃಷಿ ಯೋಗ್ಯ ಭೂಮಿಗಳನ್ನಾಗಿ ಪರಿವರ್ತಿಸಿ ಹಡಿಲು ಭೂಮಿ ಕೃಷಿ ಆಂದೋಲನ ಕೈಗೊಂಡಾಗ ಯುವ ಸಮುದಾಯ ಸ್ವ ಇಚ್ಛೆಯಿಂದ ಪಾಲ್ಗೊಂಡಿದ್ದಾರೆ. ಉಡುಪಿಯ ಯುವಜನತೆ ಕೃಷಿ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹಡಿಲು ಭೂಮಿ ಕೃಷಿಯ ಯಶಸ್ಸಿಗೆ ಕಾರಣರಾಗಿದ್ದಾರೆ.
ಈ ಬಾರಿ ಯುವ ಸಮುದಾಯವೇ ಆಸಕ್ತಿಯಿಂದ ಕೃಷಿ ಕಾರ್ಯದಲ್ಲಿ ತೊಡಗಿ ಹಡಿಲು ಭೂಮಿ ಕೃಷಿ ಮಾಡಿರುವುದು ಹೆಮ್ಮೆಯ ಸಂಗತಿ. ಇದು ನಿರಂತರವಾಗಿ ಹೀಗೇ ಮುಂದುವರಿದು ಉಡುಪಿ ವಿಧಾನಸಭಾ ಕ್ಷೇತ್ರ ಹಡಿಲು ಭೂಮಿ ಮುಕ್ತ ಮಾಡುವ ಕೇದಾರೋತ್ಥಾನ ಟ್ರಸ್ಟ್ ಕಾರ್ಯ ಸಾಕಾರಗೊಳ್ಳಲಿ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಶಾಸಕರು, ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಮೂಲಕ ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾದ ಹಡಿಲು ಭೂಮಿ ಕೃಷಿಯ ಕಡೆ ನಟ್ಟಿ "ಗೌಜು ಗಮ್ಜಲ್-2022" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊನೆಯ ನಟ್ಟಿ ಪ್ರಯುಕ್ತ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಶಾಸಕ ರಘುಪತಿ ಭಟ್ ಅವರು ಗದ್ದೆಗೆ ಹಾಲನ್ನು ಅರ್ಪಿಸಿ ಕೆಸರು ಗದ್ದೆಯ ಕ್ರೀಡೆಗಳಿಗೆ ಚಾಲನೆ ನೀಡಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/08/2022 05:40 pm