ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಇತಿಹಾಸ ಪ್ರಸಿದ್ಧ ,1500 ವರ್ಷ ಇತಿಹಾಸವಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶ ನಡೆಯುತ್ತಿದೆ.ಇಲ್ಲಿ ವಾಸ್ತುಕಲೆಯ ಅತ್ಯದ್ಭುತ ನಿದರ್ಶನವೊಂದು ಭಕ್ತಾದಿಗಳನ್ನು ಕೈ ಬೀಸಿ ಕರೆಯುತ್ತಿದೆ.ಏನಿದರ ವಿಶೇಷ? ಬನ್ನಿ ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮರದಿಂದ ಮಾಡಿದ ತಿರುಗುವ ಮುಚ್ಚಿಗೆಯೊಂದು ಕೃಷ್ಣನಗರಿಯ ಭಕ್ತರ ಆಕರ್ಷಣೆಯ ಕೇಂದ್ರಬಿಂದು ಎನಿಸಿದೆ.ಇತಿಹಾಸ ಪ್ರಸಿದ್ಧ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಇದು ನಿರ್ಮಾಣಗೊಂಡಿದೆ.ದೇವಸ್ಥಾನದದ ಪ್ರವೇಶದ್ವಾರದಲ್ಲಿರುವ ಈ ತಿರುಗುವ ಮರದ ಮುಚ್ಚಿಗೆಗೆ ಮೆಚ್ಚುಗೆಯ ಮಹಾಪೂರ ಹರಿದುಬರತೊಡಗಿದೆ.ನಿನ್ನೆ ಮುಖ್ಯಮಂತ್ರಿ ಇದನ್ನು ಉದ್ಘಾಟಿಸಿ ಸ್ವತಃ ಮೆಚ್ಚುಗೆ ಸೂಚಿಸಿದ್ದು ಇದೀಗ ಇದನ್ನು ನೋಡಲೆಂದೇ ಭಕ್ತರ ದಂಡು ಇಲ್ಲಿಗೆ ಹರಿದುಬರತೊಡಗಿದೆ...
ಜೂನ್1 ರಿಂದ ಜೂನ್ 10ರ ತನಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ.ಈ
ಅಪೂರ್ವ ಕೆತ್ತನೆಯ ತಿರುಗುವ ಮುಚ್ಚಿಗೆಯು ರಾಜ್ಯದ ಯಾವುದೇ ದೇವಸ್ಥಾನದಲ್ಲೂ ಇಲ್ಲ.ಎಂಟು ಕೋಟಿ ರೂ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ದೇವಸ್ಥಾನದಲ್ಲಿ ಅತಿ ದೊಡ್ಡ ಆಕರ್ಷಣೆಯಾಗಿರುವುದು ಈ ತಿರುಗುವ ಮುಚ್ಚಿಗೆ.ಈ ಮುಚ್ಚಿಗೆ ಆರಡಿಯಷ್ಟು ವಿಸ್ತೀರ್ಣ ಹೊಂದಿದ್ದು ಒಂದು ಪ್ರದಕ್ಷಿಣಾಕಾರವಾಗಿ ಮತ್ತೊಂದು ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ.
ತಿರುಗುವ ಮುಚ್ಚಿಗೆಯ ಮರದ ಜೋಡಣೆ ಮತ್ತು ಕೆತ್ತನೆ ವೈಭವವನ್ನು ನೋಡಿಯೇ ಅನುಭವಿಸಬೇಕು. ಜೂನ್ 10 ರತನಕ ಇಲ್ಲಿ ಬ್ರಹ್ಮಕಲಶ ನಡೆಯಲಿದ್ದು ನೀವೂ ಒಮ್ಮೆ ಬಂದು ಇದರ ಅಂದವನ್ನು ಕಣ್ತುಂಬಿಸಿಕೊಳ್ಳಿ.
PublicNext
02/06/2022 06:19 pm