ಮುಲ್ಕಿ: ಪಡು ಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2021-22ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಡುಪಣಂಬೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ತೋಕೂರು ಕಲ್ಲಾಪು ನೂತನ ಕಿರುಸೇತುವೆ ಅವೈಜ್ಞಾನಿಕ ಕಾಮಗಾರಿ, ಗ್ರಾಮ ಸಭೆಗೆ ಅಧಿಕಾರಿಗಳ ಗೈರು, ಶಿಥಿಲಗೊಂಡಿರುವ ತೋಕೂರು ಪ್ರಧಾನ ಸೇತುವೆ, ಕೃಷಿ ಇಲಾಖೆ ಅವ್ಯವಸ್ಥೆ ಬಗ್ಗೆ ಅನೇಕ ಚರ್ಚೆ ನಡೆದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಡುಪಣಂಬೂರು ಗ್ರಾಮ ಪಂಚಾಯತಿ ಗ್ರಾಮಸಭೆ 11 ಗಂಟೆಗೆ ಶುರುವಾಗ ಬೇಕಾಗಿದ್ದು, ನೋಡಲ್ ಅಧಿಕಾರಿ ಬರೋಬ್ಬರಿ ಅರ್ಧ ಗಂಟೆ ತಡವಾಗಿ ಬಂದಿದ್ದು ಗ್ರಾಮಸ್ಥರು ಹಿಡಿಶಾಪ ಹಾಕುವಂತಾಯಿತು. ಈ ನಡುವೆ ನೋಡಲ್ ಅಧಿಕಾರಿ ಶೈಲ ಸಭೆಗೆ ಬಂದ ವಿವಿಧ ಅಧಿಕಾರಿಗಳಲ್ಲಿ ಕಾಮಗಾರಿ ಬಗ್ಗೆ ಮಾಹಿತಿ ಕೇಳುತ್ತಿರುವಾಗ ಆಕ್ರೋಶಗೊಂಡ ಸದಸ್ಯ ವಿನೋದ್ ಸಾಲ್ಯಾನ್ ನೋಡಲ್ ಅಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿ ಎಂದರು.
ಪಡುಪಣಂಬೂರು ಗ್ರಾ.ಪಂ ವ್ಯಾಪ್ತಿಯ ಕಲ್ಲಾಪು ನೂತನ ಕಿರುಸೇತುವೆ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆದಿದ್ದು, ರಸ್ತೆ ಕೆಸರುಮಯವಾಗಿ ಸಂಚರಿಸಲು ತ್ರಾಸದಾಯಕವಾಗಿದೆ ಎಂದು ಗ್ರಾಮಸ್ಥರಾದ ಧರ್ಮಾನಂದ ಶೆಟ್ಟಿಗಾರ್ ದೂರಿದರು. ಅವರು ಮಾತನಾಡಿ ಪಡುಪಣಂಬೂರು ಕಿನ್ನಿಗೋಳಿ-ಕಟೀಲು ಸಂಪರ್ಕದ ಪ್ರಧಾನ ತೋಕೂರು ಹಳೆ ಸೇತುವೆ ಶಿಥಿಲಗೊಂಡಿದ್ದು ಕುಸಿದರೆ ಪ್ರಾಣ ಹಾನಿ ಹಾಗೂ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮಸ್ಥ ಆಲ್ವಿನ್ ಮಾತನಾಡಿ, ಗ್ರಾಮಸಭೆಗೆ ಬರಬೇಕಾದ ಪೊಲೀಸ್ ಇಲಾಖೆ ಸಿಬ್ಬಂದಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.
ತೋಕೂರು ಕಂಬಳಬೆಟ್ಟು ಬಳಿ ಅಂಗನವಾಡಿಗೆ ಮೀಸಲಿಟ್ಟ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಸ್ವಾಧೀನಗೊಳಿಸಿ ರಸ್ತೆ ನಿರ್ಮಿಸಿದ್ದು ಈ ಬಗ್ಗೆ ದೂರು ನೀಡಿದರೂ ಯಾಕೆ ಕ್ರಮ ಕೈಗೊಂಡಿಲ್ಲ? ಇಂದು ಧರ್ಮಾನಂದ ಶೆಟ್ಟಿಗಾರ ಪ್ರಶ್ನಿಸಿದಾಗ ಈ ಬಗ್ಗೆ ಮುಲ್ಕಿ ತಹಶೀಲ್ದಾರ್ ಪರಿಶೀಲಿಸಿದ್ದಾರೆ ಎಂದು ಕಂದಾಯಾಧಿಕಾರಿ ಮೋಹನ್ ಉತ್ತರಿಸಿದರು.
ಮೆಸ್ಕಾಂ ಇಲಾಖೆಯ ಸಿಬ್ಬಂದಿ ಕಡಿದ ಮರದ ಗೆಲ್ಲುಗಳನ್ನು ಚರಂಡಿಯಲ್ಲಿ ಹಾಕಿ ಹೋಗುತ್ತಿದ್ದಾರೆ. ವಿದ್ಯುತ್ ಕಂಬಗಳ ಮೇಲೆ ಮನೆ ಮನೆಗೆ ತಲುಪಿಸುವ ಕೇಬಲ್ ವೈರ್‌ಗಳನ್ನು ಅನಧಿಕೃತವಾಗಿ ಎಳೆದಿದ್ದಾರೆ. ಕೂಡಲೇ ತೆರವುಗೊಳಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳನ್ನು ಹಿರಿಯ ನಾಗರಿಕ ಸಮಿತಿ ಅಧ್ಯಕ್ಷ ಸದಾನಂದ ತರಾಟೆಗೆತೆಗೆದು ಕೊಂಡರು.
ಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡು ಬಳಿ ಸರಕಾರಿ ಜಾಗವನ್ನು ಕೆಲವರು ಅತಿಕ್ರಮಣ ಮಾಡಲು ಯತ್ನಿಸುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಲು ಗ್ರಾಮಸ್ಥ ಲಕ್ಷ್ಮಣ್ ಸಾಲ್ಯಾನ್ ಮನವಿ ಮಾಡಿದರು.
ಕೃಷಿ ಇಲಾಖೆಯ ಸವಲತ್ತುಗಳ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ಗ್ರಾಮಸ್ಥರಿಗೆ ಸರಿಯಾಗಿ ನೀಡುತ್ತಿಲ್ಲ ಎಂದು ಗ್ರಾಮಸ್ಥ ವಿಜಯ ಶೆಟ್ಟಿ ಹಾಗೂ ಸದಸ್ಯ ವಿನೋದ್ ಸಾಲ್ಯಾನ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕೆರೆಕಾಡು ಅಂಗನವಾಡಿ ತೀರಾ ನಾದುರಸ್ತಿಯಲ್ಲಿದೆ ಎಂದು ಅಂಗನವಾಡಿ ಸಿಬ್ಬಂದಿ ದೂರಿದರು. ಅಂಗನವಾಡಿ ಸಹಾಯಕಿ ಪ್ರೇಮಲತಾ ಮಾತನಾಡಿ ಅಂಗನವಾಡಿ ದುರಸ್ತಿ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದರು.
ಪಡುಪಣಂಬೂರು ಹೊಯಿಗೆಗುಡ್ಡೆ ರಸ್ತೆ ಅಗಲೀಕರಣದ ಬಗ್ಗೆ ಸ್ಪಷ್ಟ ಮಾಹಿತಿ ಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಶೋಕ್ ಭಟ್ ಆಗ್ರಹಿಸಿದರು.
ಪಂಚಾಯತಿ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ತ್ಯಾಜ್ಯ ಬಿಸಾಡುವ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪಂಚಾಯತ್ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕುಸುಮ ಚಂದ್ರಶೇಖರ್, ಪಿಡಿಒ ಅರುಣ್ ಪ್ರದೀಪ್ ಡಿ ಸೋಜಾ ಮತ್ತಿತರು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು.
Kshetra Samachara
27/09/2021 06:13 pm