ಉಳ್ಳಾಲ: ಎಲ್ಲರ ಮನೆ ಪರಿಸರ ಸ್ವಚ್ಛವಿರಬೇಕು. ಆದರೆ, ಅವರ ಮನೆ ತ್ಯಾಜ್ಯ ರಸ್ತೆಗೆ ಎಸೆಯುತ್ತಾರೆ! ಎಲ್ಲರಿಗೂ ತ್ಯಾಜ್ಯ ವಿಲೇವಾರಿ ಘಟಕ ಬೇಕು. ಆದರೆ, ಘಟಕ ತಮ್ಮ ಮನೆ ಪರಿಸರದಲ್ಲಿ ನಿರ್ಮಾಣಕ್ಕೆ ವಿರೋಧಿಸುತ್ತಾರೆ. ಹಾಗಿದ್ದರೆ ನೈರ್ಮಲ್ಯ ಕಾಪಾಡುವುದು ಹೇಗೆ? ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದರು.
ಅವರು ಇಂದು ಬೆಳಗ್ಗೆ ಕುತ್ತಾರಿನಿಂದ ಮುಡಿಪು ತನಕ ರಸ್ತೆಬದಿ ತ್ಯಾಜ್ಯ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಕುತ್ತಾರು ಶಾಲಾ ಪಕ್ಕದ ರಸ್ತೆ ಬದಿ ಹಣ್ಣಿನ ಗಿಡ ನೆಟ್ಟು ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರಿನಂತಹ ಮಹಾನಗರದಲ್ಲಿ ದೂರದೃಷ್ಟಿ ಇಟ್ಟುಕೊಂಡು ಕಾರ್ಯನಿರ್ವಹಿಸಿದರೂ ಜನಸಂಖ್ಯೆ ಏರುತ್ತಾ ಹೋದಂತೆ ವಿಲೇವಾರಿ ಕಷ್ಟವಾಗುತ್ತಿದೆ. ಅಲ್ಲಿನ ಸಮಸ್ಯೆ ಇನ್ನೂ ನಿವಾರಣೆ ಆಗಿಲ್ಲ. ಉಳ್ಳಾಲ ತಾಲೂಕು ಅಭಿವೃದ್ಧಿ ಆಗುತ್ತಿರುವಾಗಲೇ ದೂರದೃಷ್ಟಿ ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲರ ಸಹಕಾರ ಇದ್ದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಕುತ್ತಾರಿನಿಂದ ಮುಡಿಪು ಪೇಟೆ ತನಕ ರಸ್ತೆಬದಿಯ ಕಸ, ಪ್ಲಾಸ್ಟಿಕ್ ಸಹಿತ ತ್ಯಾಜ್ಯ ಸ್ವಚ್ಛಗೊಳಿಸಲಾಯಿತು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿನಿ ಗ್ರೀಷ್ಮಾ ಸ್ವಚ್ಛತೆ ಬಗ್ಗೆ ಅನುಭವ ಹಂಚಿದರು. ಮುಡಿಪಿನ ಜನಶಿಕ್ಷಣ ಟ್ರಸ್ಟ್ , ಮುನ್ನೂರು, ಬೆಳ್ಮ, ಮಂಜನಾಡಿ, ಕೊಣಾಜೆ, ಪಜೀರು, ಕುರ್ನಾಡು ಗ್ರಾಪಂ ವ್ಯಾಪ್ತಿ ಸ್ವಯಂಸೇವಕರು, ಪಂಚಾಯತ್ ಪ್ರತಿನಿಧಿಗಳು, ಸ್ಥಳೀಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Kshetra Samachara
25/06/2022 05:55 pm