ಮಂಗಳೂರು: ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಶಾಸಕರಾದ ಡಾ.ವೈ. ಭರತ್ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್ ಅವರು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು.
ಈ ಸಂದರ್ಭ ಶಾಸಕರು ಹಾಗೂ ಸಚಿವರು ರೋಗಿಗಳ ಬಳಿ ಸ್ವತಃ ತೆರಳಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿದರು. ವೆನ್ಲಾಕ್ ಆಸ್ಪತ್ರೆಗೆ ದಿನನಿತ್ಯ 5 ಜಿಲ್ಲೆಗಳಿಂದ 50 ರಿಂದ 60 ರೋಗಿಗಳು ದಾಖಲಾಗುತ್ತಿದ್ದು, ಕೆಲವೊಂದು ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಖಾಸಗಿ ಆಸ್ಪತ್ರೆಯ ಜೊತೆ ಒಪ್ಪಂದವಿದೆ. ಆದ್ದರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡದೆ ರೋಗಿಗಳ ಬಗ್ಗೆ ವೈದ್ಯಾಧಿಕಾರಿಗಳು, ನರ್ಸ್ ಗಳು ನಿರ್ಲಕ್ಷಿಸುತ್ತಿರುವುದು, ಖಾಸಗಿ ಆಸ್ಪತ್ರೆಗೆ ಹೋಗುವಂತೆ ಒತ್ತಾಯಿಸುತ್ತಿರೋದು ಹಾಗೂ ರೋಗಿಗಳ ಹತ್ತಿರವೇ ಬಾರದಿರುವ ಬಗ್ಗೆ ಜನಸಾಮಾನ್ಯರು ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದರು.
ಆದ್ದರಿಂದ ಏಕಾಏಕಿ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ವೆನ್ಲಾಕ್ ಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರಾದ ಡಾ.ಸದಾಶಿವ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಹಾಗೂ ಕೆಎಂಸಿ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.
Kshetra Samachara
26/01/2021 04:41 pm