ಬಂಟ್ವಾಳ: ಕೊರೊನಾ ಸೋಂಕು ಪ್ರಕರಣಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಅಧಿಕಾರಿಗಳು ಆದೇಶಗಳನ್ನಷ್ಟೇ ಮಾಡಿದರೆ ಸಾಲದು, ಅವುಗಳನ್ನು ನಿಯಂತ್ರಿಸುವ ಕೆಲಸವನ್ನು ಸ್ವತಃ ನಿಗಾ ಇರಿಸಬೇಕು. ಕೋವಿಡ್ ಕೇರ್ ಸೆಂಟರ್‌ಗಳ ಮೇಲೆ ಜನರಿಗೆ ವಿಶ್ವಾಸ ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯಿತಿ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣದ ಕುರಿತ ಸಭೆ ಮಂಗಳವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ನಾವು ಆದೇಶ ಮಾಡಿದ ಮೇಲೆ ಅನುಷ್ಠಾನ ಮಾಡದಿದ್ದರೆ ಕಂಟ್ರೋಲ್ ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಕೊರೊನಾ ನಿಯಂತ್ರಣ ವಿಚಾರದಲ್ಲಿ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು, ಕೋವಿಡ್ ಕೇರ್ ಸೆಂಟರ್ ಮೇಲೆ ಜನರಿಗೆ ವಿಶ್ವಾಸ ಮೂಡುವ ರೀತಿಯಲ್ಲಿ ಕೆಲಸ ಮಾಡಬೇಕು, ನಾವು ಸ್ಥಳಕ್ಕೆ ಹೋಗಿ ಪರಿಶೀಲಿಸದೆ ಯಾರ್ಯಾರ ಮಾತು ಕೇಳಿ ಚೆನ್ನಾಗಿದೆ ಎಂದು ನಂಬಬಾರದು ಎಂದರು.
ಯಾವುದೇ ಹಂತದಲ್ಲೂ ಸಿಬ್ಬಂದಿ ಕೊರತೆ ಸಮಸ್ಯೆ ಬರಬಾರದು, ಏನಾದರೂ ಹೆಚ್ಚುಕಮ್ಮಿಯಾದರೆ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದ ಸಚಿವರು, ಪ್ರಕರಣಗಳು ಜಾಸ್ತಿಯಾದಾಗದಂತೆ ನಿಗಾ ಇರಿಸಬೇಕು ಎಂದರು.
ಎರಡನೇ ಡೋಸ್‌ಗೆ ಬಾಕಿ ಇರುವವರ ಸಂಖ್ಯೆ ಕುರಿತು ನಿಗಾ ವಹಿಸಲು ಸೂಚಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಮಾಣಿ, ಮಂಚಿ, ಕಲ್ಲಡ್ಕ, ಬಾಳ್ತಿಲ, ಪುಂಜಾಲಕಟ್ಟೆ, ದೈವಸ್ಥಳ ಸಹಿತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಗಾ ಇರಿಸುವಂತೆ ತಿಳಿಸಿದರು.
Kshetra Samachara
17/08/2021 09:13 pm