ಉಡುಪಿ: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಹರ್ ಘರ್ ತಿರಂಗ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಪಂಚಾಯತ್ ಪಿಡಿಓಗಳಿಗೆ ಸಭೆ ನಡೆಯಿತು. ಸಭೆಯ ಆದ್ಯಕ್ಷತೆಯನ್ನು ಸಚಿವ ಸುನಿಲ್ ಕುಮಾರ್ ವಹಿಸಿದ್ದರು.
ಬಳಿಕ ಮಾತನಾಡಿದ ಸಚಿವರು ,ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರವರೆಗೆ ಜಿಲ್ಲೆಯ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ. ಆದರೆ ಈ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅಪಮಾನವಾಗದಂತೆ ಎಚ್ಚರ ವಹಿಸಿ ಎಂದು ಹೇಳಿದರು.
ಆ.13ರಿಂದ 15ರವರೆಗೆ ನಡೆಯುವ ಪ್ರತೀ ಮನೆಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗ ಅಭಿಯಾನವನ್ನು ರಾಜ್ಯದ ಪ್ರತೀ ಮನೆ ಮನೆಗಳಲ್ಲಿ ಕುಟುಂಬದ ಎಲ್ಲ ಸದಸ್ಯರು ಒಟ್ಟು ಸೇರಿ, ಕೌಟುಂಬಿಕ ಹಬ್ಬದ ರೀತಿಯಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸುವಂತೆ ಅವರು ಜನತೆಗೆ ಕರೆ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಗುವಾಗ ನಾವ್ಯಾರೂ ಹುಟ್ಟಿರಲಿಲ್ಲ. ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಸದಾವಕಾಶ ಸಿಕ್ಕಿದೆ. ಆದ್ದರಿಂದ 3 ದಿನಗಳ ಕಾಲ ಸಂಪೂರ್ಣವಾಗಿ ಅಝಾದಿ ಕಾ ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ನಿಜವಾದ ಗೌರವವನ್ನು ಸಲ್ಲಿಸಬೇಕು ಎಂದರು.
Kshetra Samachara
09/08/2022 04:37 pm