ಪ್ರಧಾನಿ ಮೋದಿಯವರ ಮಂಗಳೂರು ಭೇಟಿ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದ್ದು, ಸೆ.2 ರಂದು ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ತಿಳಿಸಿದ್ದಾರೆ. ಕೊಚ್ಚಿಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸುವ ಅವರು ಎನ್ಎಂಪಿಎಗೆ ಆಗಮಿಸಲಿದ್ದಾರೆ. ಅಲ್ಲಿ ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ.
ಬಳಿಕ ರಸ್ತೆ ಮಾರ್ಗವಾಗಿ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಗೆ ಆಗಮಿಸಲಿದ್ದಾರೆ. ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು, ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಂಟು ವಿಧಾನಸಭಾ ಕ್ಷೇತ್ರದಿಂದ ಲಕ್ಷಾಂತರ ಮಂದಿ ಕಾರ್ಯಕರ್ತರು ಬರಲಿದ್ದಾರೆ. ಈಗಾಗಲೇ 1,461 ಬಸ್, 200 ಟೆಂಪೋ ಟ್ರಾವೆಲ್ ಗಳ ಬುಕ್ಕಿಂಗ್ ಮಾಡಲಾಗಿದೆ. ಜಿಲ್ಲಾಡಳಿತ 70 ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳನ್ನು ಗುರುತಿಸಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ.
ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಕಾರ್ಯಕ್ರಮದ 80% ಪೂರ್ವ ಸಿದ್ಧತೆಯಾಗಿದೆ. ಕಾರ್ಯಕರ್ತರು ಮಧ್ಯಾಹ್ನ 11.30ರ ಒಳಗಡೆ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದರು.
PublicNext
30/08/2022 06:45 pm