ಕುಂದಾಪುರ: ಅಮಾಸೆಬೈಲು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿದವರು ಎ.ಜಿ. ಕೊಡ್ಗಿಯವರು. ಅವರ ವ್ಯಕ್ತಿತ್ವ, ಚಿಂತನೆ, ಹೋರಾಟ ಮನೋಭಾವ ಯುವಕರಿಗೆ ಹಾಗೂ ರಾಜಕಾರಣಿಗಳಿಗೆ ಆದರ್ಶಪ್ರಾಯ. ಅವರ ಪ್ರೇರಣಾ ಶಕ್ತಿಯನ್ನು ಮುಂದಿನ ಪೀಳಿಗೆ ನೆನಪಿಸಲು ರಾಜ್ಯ ಸರ್ಕಾರ ಅಮಾಸೆಬೈಲಿನಲ್ಲಿ ಎ.ಜಿ. ಕೊಡ್ಗಿ ಹೆಸರಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅಮಾಸೆಬೈಲು ಸರ್ಕಾರಿ ಹಿ.ಪ್ರಾ. ಶಾಲೆಯ ಎ.ಜಿ. ಕೊಡ್ಗಿ ಬಯಲು ರಂಗಮಂಟಪದಲ್ಲಿ ನಡೆದ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮತ್ತು ಎ.ಜಿ. ಕೊಡ್ಗಿ ಅಭಿಮಾನಿ ಬಳಗ ಆಯೋಜಿಸಿದ ಕೊಡ್ಗಿ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಕೊಡ್ಗಿ ನೇರ- ನಿಷ್ಠುರವಾದಿ. ನೀರಾವರಿ ಅಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಬಗ್ಗೆ ಅಗಾಧ ಜ್ಞಾನ ಹೊಂದಿರುವುದರಿಂದ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ತರಬೇತಿ ನೀಡುವ ಮಾಹಿತಿ ಕೇಂದ್ರ ನಿರ್ಮಿಸಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎ.ಜಿ. ಕೊಡ್ಗಿ ಎಲ್ಲಾ ರಂಗದಲ್ಲಿಯೂ ಶ್ರೇಷ್ಠತೆ ಹೊಂದಿದವರು. ಸೌಭಾಗ್ಯ ಸಂಜೀವಿನಿ ಯೋಜನೆಯ ಕನಸು ಕಂಡವರು. ಹೈನುಗಾರಿಕೆ, ಕೃಷಿ, ಸಾಹಿತ್ಯ, ಸಾಮಾಜಿಕ, ನೀರಾವರಿ, ಗ್ರಾಮೀಣಾಭಿವೃದ್ಧಿ, ರಾಜಕೀಯ ಹೀಗೆ ಎಲ್ಲಾ ರಂಗದಲ್ಲಿಯೂ ಆದರ್ಶ, ಅಪರೂಪದ ವ್ಯಕ್ತಿಯಾಗಿ ಅವರ ನೆನಪುಗಳನ್ನು ಮುಂದುವರಿಸಲು ಕೊಡ್ಗಿ ಸ್ಮರಣೆ ಆಯೋಜಿಸಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರ್ಣಾಟಕ ಬ್ಯಾಂಕ್ ಅಮಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿರುವ ಬಸ್ ನಿರ್ವಹಣೆಗಾಗಿ ನೀಡಿದ ಚೆಕ್‍ನ್ನು ಶಾಲೆಗೆ ಹಸ್ತಾಂತರ ಮಾಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಬಸ್ರೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎಲ್. ಎಚ್. ಮಂಜುನಾಥ್, ಕರ್ಣಾಟಕ ಬ್ಯಾಂಕ್‍ನ ಹಿರಿಯ ಮಾರಾಟ ಅಧಿಕಾರಿ ಗೋಕುಲದಾಸ್, ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಹಿರಿಯರಾದ ಬಿ.ಕೆ. ನರಸಿಂಹ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ. ಅಶೋಕ್ ಕುಮಾರ್ ಕೊಡ್ಗಿ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ನಿರೂಪಿಸಿದರು. ಪತ್ರಕರ್ತ ಯು.ಎಸ್. ಶೆಣೈ ವಂದಿಸಿದರು.
Kshetra Samachara
02/10/2022 03:06 pm