ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಆ.29ರಂದು ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ದ.ಕ ಜಿಲ್ಲೆಗೆ ಆಗಮನ: ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

ಸುಳ್ಯ: ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಪ್ರತಿಷ್ಠಾಪಿಸಲಿರುವ ಅಮರ ಸುಳ್ಯ ದಂಗೆಯ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಆ.29 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದೆ. ಈ‌ ಸಂದರ್ಭದಲ್ಲಿ ಸುಳ್ಯದಲ್ಲಿ ಅದ್ದೂರಿ ಸ್ವಾಗತ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಹೇಳಿದ್ದಾರೆ.‌

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಕರ್ನಾಟಕದ ಎರಡು ಚಾರಿತ್ರಿಕ ಹಿನ್ನಲೆಯ ಸ್ಥಳಗಳನ್ನು ಗುರುತಿಸಿದ್ದು ಈಗಾಗಲೇ ಪ್ರಥಮ ಸ್ವಾತಂತ್ರ್ಯದ ಹೋರಾಟದ ಬೆಳ್ಳಾರೆಯ ಪ್ರವಾಸಿ ಮಂದಿರವನ್ನು ಅಭಿವೃದ್ಧಿಗೊಳಿಸುವ ಚಿಂತನೆಯನ್ನು ಸರಕಾರ ಮಾಡಿದೆ. ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಈಗಾಗಲೇ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಸಿದ್ಧತೆ ಪೂರ್ಣಗೊಂಡಿದೆ. ಇಲ್ಲಿ ಸ್ಥಾಪಿಸಲು ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಂಚಿನ ಪ್ರತಿಮೆ ತಯಾರಾಗಿದೆ.

ಪ್ರತಿಮೆ ಆಗಸ್ಟ್ 27 ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ತಲುಪಿ ಅಲ್ಲಿಂದ 28 ರಂದು ಶ್ರೀ ನಿರ್ಮಲಾನಂದಾನಾಥ ಮಹಾಸ್ವಾಮೀಜಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಂತೆ ಬೆಳಿಗ್ಗೆ ಹೊರಟು ಸಂಜೆಗೆ ಮಡಿಕೇರಿಗೆ ತಲುಪಲಿದೆ.ಆಗಸ್ಟ್ 29 ರಂದು ಪೂ.ಗಂಟೆ 9ಕ್ಕೆ ಸಂಪಾಜೆ ಗೇಟಿನ ಬಳಿಗೆ ಆಗಮಿಸುವ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ದ.ಕ ಜಿಲ್ಲೆಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುತ್ತದೆ. ಈ ಸಂಧರ್ಭದಲ್ಲಿ ಸಚಿವರಾದ ವಿ. ಸುನಿಲ್ ಕುಮಾರ್, ಎಸ್.ಅಂಗಾರ, ಸಂಸದ ನಳಿನ್‌ಕುಮಾರ್ ಕಟೀಲ್, ದ.ಕ ಜಿಲ್ಲೆಯ ಶಾಸಕರು, ವಿವಿಧ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಅಭಿಮಾನಿಗಳು ಸ್ವಾಗತ ಮಾಡುವರು. ಪ್ರತಿಮೆಗೆ ಪೂರ್ಣಕುಂಭ ಹಾಗೂ ಬ್ಯಾಂಡ್ ಸೆಟ್ ಮೂಲಕ ಸ್ವಾಗತ ನೀಡಿ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ. ಸಂಪಾಜೆ ಗೇಟಿನಲ್ಲಿ ಕೂಡಗು ಸಂಪಾಜೆ ಹಾಗೂ ಚೆಂಬು ಹಾಗೂ ದ.ಕ ಸಂಪಾಜೆಯ ಪಂಚಾಯತ್ ಪ್ರತಿನಿಧಿಗಳು , ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ಮುಖಂಡರುಗಳು ಸ್ವಾಗತಿಸಿ ಮೆರವಣಿಗೆಯ ಮೂಲಕ ಸಾಗಿ ಬಂದು ಅರಂತೋಡು ಹಾಗೂ ಪೆರಾಜೆಗಳ ಕೇಂದ್ರಗಳಲ್ಲಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸ್ವಾಗತ ನೀಡಲಾಗುತ್ತದೆ. ಪೂ. 10.30ಕ್ಕೆ ಸುಳ್ಯಕ್ಕೆ ಆಗಮಿಸಲಿದೆ. ಗಾಂಧಿನಗರದ ಕಾಯರ್ತೋಡಿ ದೇವಸ್ಥಾನಕ್ಕೆ ತೆರಳುವ ಕೇಂದ್ರದಲ್ಲಿ ಉಬರಡ್ಕ ಮಿತ್ತೂರು ಜನತೆ ಹಾಗೂ ಕೆದಂಬಾಡಿ ಮನೆತನದವರು ಸ್ವಾಗತ ನೀಡುವರು. ಸುಳ್ಯದ ಖಾಸಗಿ ಬಸ್‌ ನಿಲ್ದಾಣದಲ್ಲಿ ಪ್ರತಿಮೆಗೆ ಜನಪ್ರತಿನಿಧಿಗಳು ಹಾಗೂ ವಿವಿಧ ಗಣ್ಯರು ಪುಷ್ಪಾರ್ಚನೆ ಮಾಡಿ ಸ್ವಾಗತ ಮಾಡಲಿದ್ದಾರೆ.ಆ ಸಂಧರ್ಭದಲ್ಲಿ ನೆಹರೂ ಸ್ಮಾರಕ ವಿದ್ಯಾಲಯದ ವಿಧ್ಯಾರ್ಥಿಗಳು ಇತ್ತೀಚೆಗೆ ರಾಜ್ಯ ಪ್ರಶಸ್ತಿ ಪಡೆದ “ ಅಮರ ಸುಳ್ಯ ಸ್ವಾತಂತ್ರ್ಯ ” ಹೋರಾಟದ ಕಿರು ನಾಟಕವನ್ನು ಪ್ರದರ್ಶಿಸಲಿದ್ದಾರೆ. ತದನಂತರ ಪೈಚಾರ್, ಜಾಲ್ಸೂರು , ಕನಕಮಜಲು ಮಾರ್ಗದ ಮೂಲಕ ಪುತ್ತೂರಿಗೆ ತೆರಳುವುದು. ಪೆರ್ನಾಜೆಯಲ್ಲಿ ಪುತ್ತೂರಿನ ಜನಪ್ರತಿನಿಧಿಗಳು , ಅಧಿಕಾರಿಗಳು , ಹಾಗೂ ಅಭಿಮಾನಿಗಳು ಸ್ವಾಗತಿಸಲಿದ್ದಾರೆ.

ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ, ಜೀವನ ಅರ್ಪಣೆ ಮಾಡಿದವರಲ್ಲಿ ಮುಂಚೂಣಿ ನಾಯಕರಾಗಿದ್ದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಸುಳ್ಯಕ್ಕೆ ಆಗಮಿಸುವ ಸಂದರ್ಯ ಅದ್ಧೂರಿಯಾಗಿ ಸ್ವಾಗತಿಸಲಾಗುವುದು.ಮಾರ್ಗದ ಇಕ್ಕೆಲಗಳಲ್ಲಿ ಪ್ರಚಾರ ಬ್ಯಾನರ್, ಪುಷ್ಪಾರ್ಚನೆ , ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಪ್ರಮುಖ ಕೇಂದ್ರಗಳಲ್ಲಿ ಆಯಾಯ ಪ್ರದೇಶದ ಮುಖಂಡರುಗಳ ಹಾಗೂ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸ್ವಾಗತ ಕಾರ್ಯ ಏರ್ಪಡಿಸಲಾಗಿದೆ. ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆಯನ್ನು ಸ್ವಾಗತಿಸಲು ಸರ್ವರ ಸಹಕಾರ ಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಡಾ.ಎನ್.ಎ.ಜ್ಞಾನೇಶ್, ಎ.ಕೆ.ಹಿಮಕರ, ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

20/08/2022 08:40 pm

Cinque Terre

10.46 K

Cinque Terre

0

ಸಂಬಂಧಿತ ಸುದ್ದಿ