ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಂತೋಷ್ ಪಾಟೀಲ್ ಕೇಸ್‌ನಲ್ಲಿ ಈಶ್ವರಪ್ಪಗೆ ಬಿಗ್ ರಿಲೀಫ್:ಮತ್ತೆ ಸಚಿವರಾಗ್ತಾರಾ?

ವಿಶೇಷ ವರದಿ: ರಹೀಂ ಉಜಿರೆ

ಉಡುಪಿ: ಮಾಜಿ ಸಚಿವ ಈಶ್ವರಪ್ಪ ಮಂತ್ರಿಗಿರಿಗೆ ಉರುಳಾಗಿ ಪರಿಣಮಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.ಗುತ್ತಿಗೆದಾರನ ಸಾವಿಗೆ ಕಾರಣವಾಗಿದ್ದರು ಎನ್ನಲಾದ ಈಶ್ವರಪ್ಪ ಅವರ ವಿರುದ್ಧ ಯಾವುದೇ ಸಾಕ್ಷಿ ಪುರಾವೆ ದೊರೆತಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ಇದರಿಂದಾಗಿ ಮಾಜಿ ಸಚಿವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ಬೆಳಗಾವಿ ಮೂಲದ ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತರಾಗಿದ್ದು ಗುತ್ತಿಗೆದಾರರಾಗಿದ್ದರು. ಏಪ್ರಿಲ್ 12 ,2022 ರಂದು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾಯುವ ಮುನ್ನ ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಡೆತ್ ನೋಟ್ ಬರೆದಿದ್ದು,ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿತ್ತು.ಮಾತ್ರವಲ್ಲ ,ರಾಜ್ಯ ಸರಕಾರದ ವಿರುದ್ಧ "40% ಕಮಿಷನ್" ಸರಕಾರ ಎಂಬ ಅಪಖ್ಯಾತಿ ತಗುಲಿಕೊಂಡಿತ್ತು.

ಮೊದಲೇ 40 ಪರ್ಸೆಂಟ್ ಕಮೀಷನ್ ಪಡೆಯುವ ಸರಕಾರ ಎನ್ನುವ ಲೇಬಲ್ ಅಂಟಿಸಿಕೊಂಡಿದ್ದ ಬೊಮ್ಮಾಯಿ ಸರಕಾರ,ಈ ಪ್ರಕರಣದಿಂದ ಬಹುತೇಕ ತಲೆತಗ್ಗಿಸುವಂತಾಗಿತ್ತು.

ಪ್ರಕರಣದ ತೀವ್ರತೆ ಅರಿತ ಬಿಜೆಪಿ ಹೈಕಮಾಂಡ್ ಸಚಿವ ಈಶ್ವರಪ್ಪ ತಲೆ ದಂಡ ಪಡೆಯಿತು.ತನಿಖೆಗೂ ಆದೇಶಿಸಿತು.ಇದೊಂದು ಜನಪ್ರತಿನಿಧಿಯ ಪ್ರಕರಣವಾಗಿದ್ದರಿಂದ ಉಡುಪಿಯಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಗೊಂಡಿತ್ತು.

ಆತ್ಮಹತ್ಯೆ ಪ್ರಕರಣದಲ್ಲಿ ಸಂತೋಷ್ ಪಾಟೀಲ್ ಮನೆಯವರು ನೇರವಾಗಿ ಸಚಿವ ಈಶ್ವರಪ್ಪ ಅವರ ಮೇಲೆ ದೂರು ದಾಖಲಿಸಿದ್ದರು.ಇದೀಗ ತನಿಖೆ ನಡೆಸಿದ ತನಿಖಾಧಿಕಾರಿಗಳು, ಮಾಜಿ ಸಚಿವ ಈಶ್ವರಪ್ಪ ಅವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಬಗ್ಗೆ ಯಾವುದೇ ದಾಖಲೆ ಲಭ್ಯವಾಗಿಲ್ಲ.ಇದೊಂದು ಪ್ಲ್ಯಾನ್ಡ್ ಮರ್ಡರ್ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಜೊತೆಗಿದ್ದ ಗೆಳೆಯರು ಕೊಲೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ.

ಈಶ್ವರಪ್ಪ 40% ಕಮೀಷನ್ ಕೇಳಿದ್ದಾರೆ ಎಂಬುದಕ್ಕೆ ದಾಖಲೆ ಇಲ್ಲ ಎಂದು ವರದಿ ಸಲ್ಲಿಸಿದ್ದಾರೆ. ಸುಮಾರು 20 ಅಕೌಂಟ್ ಗಳ ಪರಿಶೀಲನೆ ಮಾಡಿರುವ ತನಿಖಾ ತಂಡ, ಈಶ್ವರಪ್ಪ ಸಂತೋಷ್ ಸಂಪರ್ಕದ 10ಕ್ಕೂ ಹೆಚ್ಚು ಜನರ ಫೋನ್ ಸೀಜ್ ಮಾಡಿ ತನಿಖೆ ನಡೆಸಿದ್ದರು. ಈಶ್ವರಪ್ಪ ಅಥವಾ ಈಶ್ವರಪ್ಪ ಕಡೆಯವರಿಂದ ಯಾವುದೇ ಮಾತುಕತೆ ಸಂತೋಷ್ ಜೊತೆ ನಡೆದಿಲ್ಲ ಎನ್ನುವ ವರದಿ ನೀಡಿದ್ದಾರೆ. ಅಲ್ಲದೆ ಕೆಲ ದಿನಗಳ ಹಿಂದೆ ಎಫ್ ಎಸ್ ಎಲ್ ವರದಿ ಪೊಲೀಸರ ಕೈಸೇರಿದ್ದು, ಎಫ್ ಎಸ್ ಎಲ್ ವರದಿಯಲ್ಲೂ ಸ್ವಯಂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿ ಪತ್ತೆಯಾಗಿದೆ.

ಒಟ್ಟಾರೆ ಈ ಪ್ರಕರಣದ ಕುರಿತು ಒಟ್ಟು 1890 ಪುಟಗಳ ಚಾರ್ಜ್ ಶೀಟ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಹೀಗಾಗಿ ಮಾಜಿ ಸಚಿವರಿಗೆ ಇದೊಂದು ಬಿಗ್ ರಿಲೀಫ್ ಮಾತ್ರವಲ್ಲ ,ಮತ್ತೆ ಸಚಿವರಾಗಲು ಈಶ್ವರಪ್ಪ ಹಾದಿ ಸುಗಮವಾದಂತಾಗಿದೆ.ಆದರೆ ವಿರೋಧಪಕ್ಷಗಳು ಈ ವಿಷಯದಲ್ಲಿ ಇನ್ನಷ್ಟು ಹೋರಾಟ ಮಾಡುತ್ತಾ? ಬಿಜೆಪಿ ಹೈಕಮಾಂಡ್ ಮತ್ತೆ ಈಶ್ವರಪ್ಪಗೆ ಮಂತ್ರಿಗಿರಿ ಕೊಡುತ್ತಾ ?ಅಥವಾ ಚುನಾಣಾ ವರ್ಷದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಯಥಾಸ್ಥಿತಿ ಕಾಪಾಡುತ್ತಾ? ಇವನ್ನೆಲ್ಲ ಕಾಲವೇ ನಿರ್ಧರಿಸಲಿದೆ.

Edited By : Manjunath H D
PublicNext

PublicNext

20/07/2022 11:13 pm

Cinque Terre

52.96 K

Cinque Terre

7