ಉಡುಪಿ: ಹಂಸಲೇಖ-ಪೇಜಾವರ ಶ್ರೀ ಪ್ರಕರಣದಲ್ಲಿ ದಲಿತ ಸಮುದಾಯವನ್ನು ಅವಮಾನಿಸುತ್ತಿರುವ ಪ್ರಜಾಪ್ರಭುತ್ವ ವಿರೋಧಿ ಮನುವಾದಿ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಇಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಉಡುಪಿಯ ಹುತಾತ್ಮ ಸೈನಿಕ ಸ್ಮಾರಕದ ಎದುರು ಪ್ರತಿಭಟನೆ ಹಮ್ಮಿಕೊಂಡ ಕಾರ್ಯಕರ್ತರು ದಲಿತ ವಿರೋಧಿ ಮನುವಾದಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಸಮಿತಿ ಮುಖಂಡ ಜಯನ್ ಮಲ್ಪೆ ತಮಟೆ ಬಾರಿಸಿ ಪ್ರತಿಭಟನೆಗೆ ಚಾಲನೆ ನೀಡಿದರು.
ಚಿತ್ರ ಸಾಹಿತಿ ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ಆಡಿದರೆನ್ನಲಾದ ಕೆಲವು ಮಾತು ವಿರೋಧಿಸಿ ರಾಜ್ಯಾದ್ಯಂತ ಒಂದು ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಬಹಿರಂಗವಾಗಿ ಶೋಷಿತ ಸಮುದಾಯಗಳ ವಿರುದ್ಧ ಮತ್ತು ಸಂವಿಧಾನದ ವಿರುದ್ಧ ಅವಹೇಳನಕಾರಿ ಬರವಣಿಗೆ ಪ್ರಕಟಿಸುತ್ತಿದೆ. ಕೆಲವು ಕಿಡಿಗೇಡಿ ಮನಸ್ಸುಗಳು ಸಾಮಾಜಿಕ ನ್ಯಾಯ ಮತ್ತು ಪರಿಶಿಷ್ಟರು ಆಡಳಿತದಲ್ಲಿ ಒಳಗೊಳ್ಳುವಿಕೆಯನ್ನು ವಿರೋಧಿಸಿ, ಪೋಸ್ಟಿಂಗ್ ಹರಿಯ ಬಿಡುತ್ತಿದ್ದಾರೆ.ಈ ಬಗ್ಗೆ ಸಂಘಟನೆ ತನಿಖೆ ನಡೆಸಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿರುವುದು ತಿಳಿದು ಬಂದಿದೆ.
ಹಂಸಲೇಖ ಲಘು ದಾಟಿಯಲ್ಲಿ ಪೇಜಾವರರ ದಲಿತ ಕಾಲೊನಿ ಭೇಟಿ ಬಗ್ಗೆ ಪ್ರಸ್ತಾಪಿಸಿರುವ ವಿಷಯ ಇಡೀ ದಲಿತ ಸಮುದಾಯವನ್ನು ಮತ್ತು ಹಿಂದುಳಿದ ಜಾತಿಗಳನ್ನು ಅಮಾನಿಸುವ ಮತ್ತು ಅವರಿಗೆ ಸಂವಿಧಾನಾತ್ಮಕವಾಗಿ ನೀಡಲಾದ ಕೆಲವೊಂದು ವಿಶೇಷ ಅವಕಾಶಗಳನ್ನು ಗೇಲಿ ಮಾಡುವ ಮಟ್ಟಕ್ಕೆ ತೆಗೆದುಕೊಂಡು ಹೋಗಲು ವ್ಯವಸ್ಥಿತ ಜಾಲವೊಂದನ್ನು ಮನುವಾದಿ ಶಕ್ತಿಗಳು ಮಾಡಿದಂತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
22/11/2021 12:08 pm