ಬ್ರಹ್ಮಾವರ : ಸುಮಾರು ಹದಿನೈದು ವರ್ಷಗಳಿಂದ ಮುಚ್ಚಿರುವ ಹಾಗೂ ನೈಪಥ್ಯಕ್ಕೆ ಸರಿಯುತ್ತಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳುವ ಹೋರಾಟ ಸಾಕಷ್ಟು ಬಾರಿ ನಡೆದಿದ್ದು ಇದೀಗ ಹೊಸ ಆಡಳಿತದ ಮಂಡಳಿ ಈ ನಿಟ್ಟಿನಲ್ಲಿ ಒಂದಷ್ಟು ಪೂರಕ ಚಟುವಟಿಕೆಯಲ್ಲಿ ತೊಡಗಿದೆ. ಹೀಗಾಗಿ ಸಕ್ಕರೆ ಕಾರ್ಖಾನೆಯ ಅಳವು-ಉಳಿವಿನ ಸಾಧ್ಯತೆಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಮಾಧ್ಯಮ ಸಂವಾದ ಕಾರ್ಯಕ್ರಮ ಶನಿವಾರ ಬ್ರಹ್ಮಾವರ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ಜರಗಿತು.
ಕಾರ್ಖಾನೆ ಆಡಳಿತ ಮಂಡಳಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ 152 ಸಂಸ್ಥೆಗಳು ಎಥೆನಾಲ್ ಘಟಕ ಸ್ಥಾಪನೆಗೆ ಹೆಸರು ನೊಂದಾಯಿಸಿಕೊಂಡಿದ್ದು ಇದರಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯೂ ಒಂದು. ಎಥೆನಾಲ್ ಘಟಕ ಸ್ಥಾಪನೆಗೆ ಸರಕಾರದಿಂದ ದೊಡ್ಡ ಮಟ್ಟದ ಸಹಕಾರ ದೊರೆಯುತ್ತದೆ ಹಾಗೂ ಅರ್ಥಿಕ ಸಂಸ್ಥೆಗಳು ನೆರವು ನೀಡಬೇಕೆಂಬ ಸೂಚನೆ ಇದೆ. ಘಟಕಕ್ಕೆ ಅಗತ್ಯವಿರುವ ಜಾಗ ಹಾಗೂ ಮೂಲಸೌಕರ್ಯಗಳು ನಮ್ಮಲ್ಲಿ ಇದೆ. ಹೀಗಾಗಿ ಸಕ್ಕರೆ ಉತ್ಪಾದನೆ ಮತ್ತು ಎಥೆನಾಲ್ ಘಟಕದೊಂದಿಗೆ ಕಾರ್ಖಾನೆ ಪುನರ್ ನಿರ್ಮಾಣಕ್ಕೆ ಈಗಾಗಲೇ ಪೂರಕ ತಯಾರಿಗಳು ನಡೆಯುತ್ತಿದ್ದು ಎಲ್ಲಾ ಅಂದುಕೊಂಡಂತೆ ನೆರವೇರಿದರೆ 2023ರ ಅಂತ್ಯದೊಳಗೆ ಕಾರ್ಖಾನೆ ಪುನಾರಂಭಗೊಳ್ಳಲಿದೆ ಎನ್ನುವ ಭರವಸೆ ನೀಡಿದರು.
ಕಾರ್ಖಾನೆಯನ್ನು ಹೇಗೆ ಪುನರಾರಂಭಿಸುತ್ತೀರಿ ಎನ್ನುವ ಪ್ರಶ್ನೆಗೆ, ಈಗ ಇರುವ ಸಾಲ ಕೇವಲ ೮೫ಕೋಟಿ ರೂ ಮಾತ್ರ. ಅಸಲಿಗಿಂತ ಹೆಚ್ಚಿನ ಬಡ್ಡಿ ಮೊತ್ತ ಸೇರಿ ಇಷ್ಟೊಂದು ಸಾಲವಾಗಿದೆ. ಹೀಗಾಗಿ ಕೆಲವೊಂದು ಸಂಸ್ಥೆಗಳೊಂದಿಗೆ ಕಾನೂನು ಹೋರಾಟ ಚಾಲ್ತಿಯಲ್ಲಿದೆ ಹಾಗೂ ಸ್ಥಳೀಯ ಸಹಕಾರಿ ಸಂಘಗಳಲ್ಲಿ ಸೌರ್ಹಾದಯುತವಾಗಿ ಮಾತುಕತೆ ನಡೆಸಿ ರಿಯಾಯಿತಿಯೊಂದಿಗೆ ಸಾಲವನ್ನು ಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಹೊಸ ಕಾರ್ಖಾನೆ ನಿರ್ಮಿಸಲು 150ಕೋಟಿ ರೂ ಬೇಕಾಗಬಹುದು. ಕಾರ್ಖಾನೆಯ ಈಗಿರುವ ಯಂತ್ರೋಪಕರಣ ಸಂಪೂರ್ಣ ಗುಜರಿಗೆ ಹಾಕಬೇಕಿದ್ದು ಇದರಿಂದ 4-5ಕೋಟಿ ಆದಾಯ ಬರಲಿದೆ. ಎಥೆನಾಲ್ ಘಟಕ ಆರಂಭಿಸಲು ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್ಗಳು ಸಾಲ ನೀಡಬೇಕು ಎನ್ನುವ ಕೇಂದ್ರ ಸರಕಾರದ ನಿಯಮವಿದೆ. ಉದ್ಯಮಿಗಳಿಂದ ಷೆರ್ ಹೂಡಿಕೆಯ ಮೂಲಕ ಅರ್ಥಿಕ ನೆರವು ಪಡೆಯಲು ಎಲ್ಲಾ ತಯಾರಿ ನಡೆದಿದೆ. ಈ ಆದಾಯವನ್ನೆಲ್ಲ ಬಳಸಿಕೊಂಡು ಕಾರ್ಖಾನೆ ಪುನರಾರಂಭಿಸುತ್ತೇವೆ ಎಂದರು.
ಜಿಲ್ಲೆಯಲ್ಲಿ ಕಬ್ಬು ಬೆಳೆಯುವುದನ್ನು ಈಗಾಗಲೇ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಆದ್ದರಿಂದ ಮುಂದೆ ಕಾರ್ಖಾನೆ ಆರಂಭಿಸಿದರೆ ಅಗತ್ಯ ಪ್ರಮಾಣದ ಕಬ್ಬು ಸಿಗಬಹುದೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ಈಗಾಗಲೇ 2ಸಾವಿರ ಮಂದಿ ರೈತರು ಕಾರ್ಖಾನೆ ಆರಂಭಿಸಿದರೆ ಕಬ್ಬು ಬೆಳೆಯುವುದಾಗಿ ಭರವಸೆ ಪತ್ರ ನೀಡಿದ್ದಾರೆ ಹಾಗೂ ವಾರಾಹಿ ನೀರಾವರಿ ಪ್ರದೇಶದಲ್ಲೇ 10ಸಾವಿರ ಎಕ್ರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಅವಕಾಶವಿದೆ. ಆದ್ದರಿಂದ ಕಾರ್ಖಾನೆ ಆರಂಭವಾದರೆ ಕಬ್ಬು ಸಿಗುತ್ತದೆ ಎಂದರು ಹಾಗೂ ಸರಕಾರ
ಕಾರ್ಖಾನೆಯ ಸಾಲ ಮನ್ನಾ ಮಾಡಿ, ಹೊಸ ಸಾಲಕ್ಕೆ ಅಗತ್ಯವಿರುವ ನೆರವು ನೀಡಿದರೆ ತುಂಬಾ ಸಹಕಾರವಾಗುತ್ತದೆ ಎಂದರು.
ಕಬ್ಬು ಬೆಳೆಸಿ ಎನ್ನುವ ಅಭಿಯಾನವನ್ನು ಅಕ್ಟೋಬರ್ನಲ್ಲಿ ಹಾಕಿಕೊಳ್ಳಲಿದ್ದೇವೆ ಹಾಗೂ 1500ಎಕ್ರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಉತ್ತೇಜನ ನೀಡಲಿದ್ದೇವೆ. ದೊಡ್ಡಮಟ್ಟದಲ್ಲಿ ಬೆಲ್ಲದ ಘಟಕ ಅಳವಡಿಸಲಿದ್ದೇವೆ. ಕಾರ್ಖಾನೆ ಆರಂಭವಾಗುವ ತನಕ ರೈತರ ಕಬ್ಬನ್ನು ನಿರಂತರ ಬೆಲ್ಲ ತಯಾರಿಗೆ ಬಳಸಿಕೊಳ್ಳುತ್ತೇವೆ. ಈ ಮೂಲಕ ಹಂತ-ಹಂತವಾಗಿ ರೈತರಲ್ಲಿ ಭರವಸೆ ಮೂಡಿಸಲಿದ್ದೇವೆ. ಸಕ್ಕರೆ ಉತ್ಪಾದನೆ, ಎಥೆನಾಲ್ ಉತ್ಪಾದನೆಯ ಜತೆಗೆ ಬೆಲ್ಲದ ಆಲೆಮನೆ, ಗಾಣದ ತೆಂಗಿನ ಎಣ್ಣೆ ಉತ್ಪಾದನೆ, ಭತ್ತ ಖರೀದಿ, ಭತ್ತದ ಮಿಲ್, ವಾಣಿಜ್ಯ ಸಂಕೀರ್ಣ ನಿರ್ಮಾಣ, ಹಿಟ್ಟು ತಯಾರಿಕೆ ಘಟಕ, ಗೋಡಾಮು ನಿರ್ಮಾಣ ಸೇರಿದಂತೆ ರೈತರಿಗೆ ಪೂರಕವಾದ ವಿವಿಧ ಯೋಜನೆಗಳನ್ನು ರೂಪಿಸಲಿದ್ದೇವೆ. ಎರಡು ಕ್ಷೇತ್ರಗಳ ಸಂಸದರು ಜತೆಯಾಗಿ ಸಭೆ ನಡೆಸಿ ಕಾರ್ಖಾನೆ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಭರವಸೆ ನೀಡಿದ್ದು ಶೀಘ್ರದಲ್ಲೇ ಈ ಸಭೆ ನಡೆಯಲಿದೆ ಎಂದರು.
ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಗೋಷ್ಠಿ ಉದ್ಘಾಟಿಸಿದರು. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ಉಮಾನಾಥ ಶೆಟ್ಟಿ, ನಿರ್ದೇಶಕ ಆಸ್ತಿಕ್ ಶಾಸ್ತ್ರಿ, ಸಂತೋಷ್ ಶೆಟ್ಟಿ ಬಾಲಾಡಿ, ಸನ್ಮತ್ ಹೆಗ್ಡೆ, ಸುಬ್ಬ ಬಿಲ್ಲವ, ರತ್ನಾಕರ ಗಾಣಿಗ, ಕಾರ್ಖಾನೆಯ ಮ್ಯಾನೇಜರ್ ಗೋಪಾಲಕೃಷ್ಣ, ಕಾನೂನು ಸಲಹೆಗಾರ ವಿಜಯ ಹೆಗ್ಡೆ, ಉದ್ಯಮಿ ಭರತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಜತೆ ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿ, ವಸಂತ್ ಗಿಳಿಯಾರ್ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ತಾಲೂಕು ಸಂಘದ ಖಜಾಂಚಿ ಮೋಹನ್ ಉಡುಪ ವಂದಿಸಿದರು.
Kshetra Samachara
08/08/2021 08:26 pm