ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಪಂಚಾಯತ್ ಚುನಾವಣೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಿಗೆ ಮಾಜಿ ಪಂಚಾಯತ್ ಅಧ್ಯಕ್ಷರ ಬಂಡಾಯ ಬಿಸಿತುಪ್ಪವಾಗಿ ಪರಿಣಮಿಸಿದೆ.
ಮುಲ್ಕಿ ಹೋಬಳಿಯ ಪ್ರತಿಷ್ಠಿತ ಕಿಲ್ಪಾಡಿ ಪಂಚಾಯತಿಯಲ್ಲಿ ಈ ಬಾರಿ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಕಾಂತ ಕೆರೆಕಾಡು, ಸದಸ್ಯ ನಾಗರಾಜ ಕುಲಾಲ್, ಹಾಗೂ .ಬಿಜೆಪಿಯ ಪ್ರಬಲ ನಾಯಕ ಮೋಹನ್ ಕು ಬೆವೂರು ರವರಿಗೆ ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಿದ್ದು ಬಂಡಾಯ ಸ್ಪರ್ಧಿಸಿ ಬಿಜೆಪಿಗೆ ಸಡ್ಡು ಹೊಡೆದಿದ್ದಾರೆ.
ಈ ನಡುವೆ ಚುನಾವಣಾ ಪ್ರಚಾರದ ವೇಳೆ ಬಂಡಾಯ ನಿಂತಿರುವ ಕಿಲ್ಪಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಕಾಂತ್ ಕೆರೆಕಾಡು ಪಂಚಾಯತ್ ವ್ಯಾಪ್ತಿಯ ಕೆರೆಕಾಡು ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿಗಳನ್ನು ತಾನು ಮಾಡಿಸಿದ್ದೇನೆ ತನಗೆ ಮತ ನೀಡಿ ಎಂದು ಹೇಳಿದ್ದು ಶಾಸಕರ ಕಣ್ಣು ಕೆಂಪಾಗಿಸಿದೆ.
ಇದಕ್ಕೆ ಶಾಸಕರು ಗರಂ ಆಗಿದ್ದು ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕರ ಪ್ರಕಾರ ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ಒಂದು ಕೋಟಿ 80 ಲಕ್ಷದ ಅಭಿವೃದ್ಧಿ ಕಾಮಗಾರಿ ಶಾಸಕರ ಹಾಗೂ ಉಸ್ತುವಾರಿ ಸಚಿವರ ಅನುದಾನದಿಂದ ನಡೆದಿದ್ದು ಎಲ್ಲಾ ಕಾಮಗಾರಿ ನಾನೇ ಅಧ್ಯಕ್ಷನಾಗಿ ಮಾಡಿಸಿದ್ದು ಎಂದು ಸುಳ್ಳು ಹೇಳುತ್ತಿದ್ದಾನೆ.
ಮಾಜೀ ಅಧ್ಯಕ್ಷ ಶ್ರೀಕಾಂತ್ ಕೆರೆಕಾಡು ಬ್ರಷ್ಟಾಚಾರಿ ಯಾಗಿದ್ದು ಬಿಜೆಪಿ ಪಕ್ಷದಲ್ಲಿ ಟಿಕೆಟ್ ನೀಡಿಲ್ಲ. ತಾನೇ ಎಲ್ಲಾ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ ಎಂದು ಬೊಗಳೆ ಸುತ್ತಿರುವ ಈತ ಮಾಡಿದ ಭ್ರಷ್ಟಾಚಾರದ ಎಲ್ಲಾ ವರದಿಗಳು ನನ್ನ ಬಳಿಯಲ್ಲಿದೆ.
ಜಾಸ್ತಿ ಮಾತಾಡಿದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂಬ ಶಾಸಕರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಉತ್ತರ ನೀಡಿರುವ ಮಾಜೀ ಪಂಚಾಯತ್ ಅಧ್ಯಕ್ಷ ಶ್ರೀಕಾಂತ ಕೆರೆಕಾಡು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿ ತಾನು ಅಧ್ಯಕ್ಷನಾಗಿದ್ದಾಗ ಯಾವುದೇ ಅವ್ಯವಹಾರ ಮಾಡಿದ್ದರೇ ಲೋಕಾಯುಕ್ತ ತನಿಖೆ ಎದುರಿಸಲು ಸಿದ್ಧ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲಿನ ಹತಾಶೆಯಿಂದ ಈ ರೀತಿ ಆರೋಪವನ್ನು ಮಾಡುತ್ತಿದ್ದಾರೆ.
ಚುನಾವಣಾ ಅಭ್ಯರ್ಥಿಯನ್ನು ಏಕವಚನದಲ್ಲಿ ನಿಂದಿಸುವುದು ಮಾನ್ಯ ಶಾಸಕ ಉಮಾನಾಥ ಕೋಟ್ಯಾನ್ ರವರಿಗೆ ಶೋಭೆಯಲ್ಲ. ಅವ್ಯವಹಾರದ ಆರೋಪ ಮಾಡಿದ್ದಕ್ಕೆ ಶಾಸಕರ ವಿರುದ್ಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಶಾಸಕರ ಆರೋಪಕ್ಕೆ ಮತದಾರರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
Kshetra Samachara
18/12/2020 09:06 pm