ಮುಲ್ಕಿ: ಮುಲ್ಕಿ ಹೋಬಳಿಯ 8 ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ಚುನಾವಣೆಯಲ್ಲಿ ಶಾಸಕರ ಸಹಿತ ಅಧಿಕಾರಿಗಳು ಆಡಳಿತ ಯಂತ್ರ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಶಾಸಕರು ಕೂಡ ಕಾಂಗ್ರೆಸ್ ಬೆಂಬಲಿತ ಪಂಚಾಯಿತಿ ಅಭ್ಯರ್ಥಿಗಳಿಗೆ ಬೆದರಿಕೆ ಕರೆ ಮಾಡುತ್ತಿದ್ದು, ಅಭ್ಯರ್ಥಿಗಳು ಭಯಭೀತರಾಗಿದ್ದಾರೆ.
ಬಿಜೆಪಿ ಯವರಿಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆಯಿಲ್ಲ. ಜನರಿಗೆ ಕೊಟ್ಟ ಅಧಿಕಾರ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದರು. ಬಿಜೆಪಿ ಶಾಸಕರು ಸಹಿತ ಜಿಪಂ, ತಾಪಂ ಸದಸ್ಯರು ಕಾಮಗಾರಿ ನಡೆಸುತ್ತಿದ್ದು, ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಬಾರಿ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹು ಮತದಿಂದ ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಯು ಎಸ್ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಗಂಭೀರವಾಗಿ ಆರೋಪಿಸಿರುವ ಅವರು, ತಾಕತ್ತಿದ್ದರೆ ಸರಕಾರವು ಎಸ್ಡಿಪಿಐ ನಿಷೇಧಿಸಲಿ ಎಂದು ಸವಾಲೆಸೆದರು.
ಮುಲ್ಕಿ ಹೋಬಳಿಯ 8 ಪಂಚಾಯಿತಿಗಳಲ್ಲಿ 113 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದರು. ಕಳೆದ ದಿನಗಳ ಹಿಂದೆ ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ ಐವಾನ್, ಘಟನೆ ನಡೆಯಲು ಬಿಜೆಪಿಯ ಷಡ್ಯಂತ್ರ ವೇ ಕಾರಣ.
ಹಿಂಬಾಗಿಲಿನ ಮೂಲಕ ಅಧಿಕಾರ ಪಡೆದುಕೊಂಡ ಬಿಜೆಪಿಯ ಕೃತ್ಯ ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬೆರ್ನಾಡ್, ಮೋಹನ್ ಕೋಟ್ಯಾನ್ ಶಿಮಂತೂರು, ಅಶೋಕ್ ಪೂಜಾರಿ, ಶಾಹುಲ್ ಹಮೀದ್, ಅಬ್ದುಲ್ ಅಝೀಝ್ ಹಳೆಯಂಗಡಿ, ಶಮೀರ್ ಕೆಎಸ್ ರಾವ್ ನಗರ, ಸಿರಾಜ್ ಬಜ್ಪೆ, ಸತೀಶ್ ಕೋಟ್ಯಾನ್, ರಮಾನಂದ ಕಟೀಲು, ವನಿತಾ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/12/2020 06:08 pm