ಉಡುಪಿ : ಗ್ರಾಮ ಪಂಚಾಯತ್ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ ಈ ಮಧ್ಯೆ ಜಿಲ್ಲೆಯಲ್ಲಿ ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.
ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಕ್ಕುಪತ್ರ ಹಾಗೂ ಜೆಟ್ಟಿ ಸಮಸ್ಯೆಗಳು ದಶಕಗಳಿಂದ ಬಗೆಹರಿಯದ್ದನ್ನು ಖಂಡಿಸಿ, ಗ್ರಾಮಸ್ಥರು ಗ್ರಾ.ಪಂ. ಚುನಾವಣೆಯನ್ನೇ ಬಹಿಷ್ಕಾರ ಮಾಡುತ್ತಿದ್ದಾರೆ.
ಪಂಚಾಯತ್ ವ್ಯಾಪ್ತಿಯ ಕೋಡಿಕನ್ಯಾಣ, ಕೋಡಿತಲೆ, ಕೋಡಿ ಹೊಸಬೆಂಗ್ರೆ, ಕೋಡಿಬೆಂಗ್ರೆ ಗ್ರಾಮಗಳ ಮತದಾರರು ಸಭೆ ಸೇರಿ, ಚುನಾವಣೆ ಬಹಿಷ್ಕಾರ ನಿರ್ಧಾರ ಪ್ರಕಟಿಸಿದ್ದಾರೆ.
ಈ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಸ್ಥಳೀಯ ಮುಖಂಡರೂ ಭಾಗವಹಿಸಿ, ಗ್ರಾಮಸ್ಥರ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜಕೀಯ ಪಕ್ಷಗಳ ಬೆಂಬಲಿತರು ಚುನಾವಣೆಗೆ ನಾಮಪತ್ರ ಸಲ್ಲಿಸದಿರಲು ಹಾಗೂ ಯಾರಾದರೂ ವೈಯಕ್ತಿಕವಾಗಿ ಉಮೇದುವಾರಿಕೆ ಸಲ್ಲಿಸಿದರೆ, ನಾಮಪತ್ರ ಹಿಂಪಡೆಯಲು ಮನವೊಲಿಸಲು ನಿರ್ಧರಿಸಲಾಗಿದೆ.
ಕೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಸಿಸುವ ನೂರಾರು ಕುಟುಂಬಗಳು ಕಳೆದ ನಾಲ್ಕು ದಶಕಗಳಿಂದ ಹಕ್ಕುಪತ್ರವಿಲ್ಲದೇ ಪರಿತಪಿಸುತ್ತಿವೆ. ನದಿ ಹಾಗೂ ಸಮುದ್ರ ತೀರದಲ್ಲಿರುವ ಈ ಪಂಚಾಯತ್ ವ್ಯಾಪ್ತಿಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಝಡ್.) ಕಠಿಣ ನಿಯಮದಿಂದಾಗಿ ಹಕ್ಕು ಪತ್ರ ಸಿಗುತ್ತಿಲ್ಲ.
ಈ ಕುರಿತು ಸಾಕಷ್ಟು ಸಲ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರೊಂದಿಗೆ ಈ ಪ್ರದೇಶದಲ್ಲಿ ಜೆಟ್ಟಿ ಅಭಿವೃದ್ಧಿ ಹಲವು ವರ್ಷಗಳಿಂದ ಕನಸಾಗಿ ಉಳಿದಿದೆ.
ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಚುನಾವಣೆ ಬಂದಾಗ ಆಶ್ವಾಸನೆ ನೀಡಿ ಚುನಾವಣೆ ಮುಗಿದ ಮೇಲೆ ಮರೆಯುತ್ತಾರೆ. ಆದ್ದರಿಂದ ನಾವೆಲ್ಲ ಒಗ್ಗಟ್ಟಾಗಿ ಚುನಾವಣೆ ಬಹಿಷ್ಕರಿಸಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
Kshetra Samachara
10/12/2020 11:35 am