ಮುಲ್ಕಿ: ಮುಲ್ಕಿ ನ.ಪಂ. ವ್ಯಾಪ್ತಿಯ ಕೆ.ಎಸ್ . ರಾವ್ ನಗರದ ಲಿಂಗಪ್ಪಯ್ಯಕಾಡು ನಾಗಬನದ ಬಳಿ 2 ದಿನಗಳಿಂದ ಪರವಾನಿಗೆ ಇಲ್ಲದೆ ಕನಕ ವೃತ್ತ ಕಟ್ಟೆ ನಿರ್ಮಿಸಿ ಕನಕ ಜಯಂತಿ ಆಚರಣೆ ನಡೆಸಿದ ವಿವಾದಕ್ಕೆ ಮುಲ್ಕಿ ನ.ಪಂ. ಮುಖ್ಯಾಧಿಕಾರಿ ಹಾಗೂ ಮಾಜಿ ಅಧ್ಯಕ್ಷರ ಮಧ್ಯಸ್ಥಿಕೆಯಿಂದ ತೆರೆ ಬಿದ್ದಿದೆ.
ಡಿ.3 ರಂದು ಮುಲ್ಕಿ ನ.ಪಂ. ವ್ಯಾಪ್ತಿಯ ಲಿಂಗಪ್ಪಯ್ಯಕಾಡಿನ ನಾಗಬನ ಬಳಿಯ ರಸ್ತೆ ಪಕ್ಕ ಸ್ಥಳೀಯ ಕರಾವಳಿ ಕುರುಬರ ಸಂಘದ ವತಿಯಿಂದ ಪಂಚಾಯತಿ ಪರವಾನಿಗೆ ಇಲ್ಲದೆ ಏಕಾಏಕಿ ಕನಕದಾಸ ವೃತ್ತ ನಿರ್ಮಿಸಿ ಕನಕದಾಸ ಜಯಂತಿ ಆಚರಿಸಲಾಗಿತ್ತು.
ಈ ಬಗ್ಗೆ ಸೂಕ್ತ ಪರವಾನಗಿ ಪಡೆಯದ ಹಿನ್ನೆಲೆಯಲ್ಲಿ ಆಚರಣೆ ಮುಗಿದ ತಕ್ಷಣ ವೃತ್ತ ತೆರವಿಗೆ ಸ್ಥಳೀಯಾಡಳಿತ ಸೂಚನೆ ನೀಡಿತ್ತು. ಆದರೆ, ಎರಡು ದಿನ ಕಳೆದರೂ ವೃತ್ತ ತೆರವುಗೊಳಿಸದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಬಳಿಕ ಮುಲ್ಕಿ ನಗರಾಡಳಿತ ವೃತ್ತ ತೆರವುಗೊಳಿಸಿತ್ತು. ನ.ಪಂ. ಆಡಳಿತ ಏಕಾಏಕಿ ರಾತೋರಾತ್ರಿ ವೃತ್ತ ತೆರವು ಮಾಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಕುರುಬರ ಸಂಘದ ಅಧ್ಯಕ್ಷ ಪುಂಡಲೀಕ ನೇತೃತ್ವದಲ್ಲಿ 60 ಕುರುಬ ಕುಟುಂಬಗಳು ಒಂದಾಗಿ ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಆಗ ಸ್ಥಳೀಯ ನ.ಪಂ. ಸದಸ್ಯ ಮಂಜುನಾಥ ಕಂಬಾರ, ಮುಖಂಡರಾದ ಮಂಜುನಾಥ ಆರ್ ಕೆ, ವಿಠಲ ಎನ್ಎಮ್, ಭೀಮಶಂಕರ್ ಆರ್ ಕೆ., ವೀರಯ್ಯ ಹಿರೇಮಠ ಸಹಿತ ಹಲವರು ಆಗಮಿಸಿ ಪರಿಸ್ಥಿತಿ ತಿಳಿಯಾಗಿಸಲು ಪ್ರಯತ್ನಿಸಿದರೂ ಫಲಕಾರಿಯಾಗದೆ ಕುರುಬ ಸಂಘದ ಅಧ್ಯಕ್ಷರು ಸಹಿತ ಪ್ರತಿಭಟನಾಕಾರರು ಮುಲ್ಕಿ ನ.ಪಂ.ಗೆ ತೆರಳಿ ಅಧ್ಯಕ್ಷ ಸುಭಾಸ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮುಖ್ಯಾಧಿಕಾರಿ ಚಂದ್ರ ಪೂಜಾರಿಯವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿ ಶೀಘ್ರ ಕನಕದಾಸ ವೃತ್ತ ನಿರ್ಮಿಸಿಕೊಡುವಂತೆ ಮತ್ತು ಕನಕ ಮಂದಿರ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ನ.ಪಂ. ಮಾಜಿ ಅಧ್ಯಕ್ಷ ಸುನಿಲ್ ಆಳ್ವ ಆಗಮಿಸಿ ಪ್ರತಿಭಟನಾಕಾರರ ಜತೆ ಸಮಾಲೋಚನೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮದ ಭರವಸೆ ನೀಡಿದಾಗ ಪರಿಸ್ಥಿತಿ ತಿಳಿಗೊಂಡಿತು. ಬಳಿಕ ನ.ಪಂ. ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಕರಾವಳಿ ಕುರುಬರ ಸಂಘದ ಮೂಲಕ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿದಲ್ಲಿ, ಆಡಳಿತ ಸಮಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದರು.
ಕುರುಬರ ಸಂಘ ಅಧ್ಯಕ್ಷ ರಂಗಪ್ಪ ಯಾನೆ ಪುಂಡಲೀಕ ಮಾತನಾಡಿ, ನಮಗೆ ಅವಶ್ಯವಾಗಿ ಕನಕ ಮಂದಿರ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಬೇಕು ಎಂದರು. ಕರಾವಳಿ ಕುರುಬರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಮಾತನಾಡಿ, ಕನಕ ಜಯಂತಿ ಆಚರಣೆಗೆ ನಮಗೆ ಅವಕಾಶ ಕಲ್ಪಿಸುವುದು ನಗರಾಡಳಿತದ ಕರ್ತವ್ಯ. ಕನಕ ಮಂದಿರ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
Kshetra Samachara
05/12/2020 04:40 pm