ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಗುರುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 35 ವರ್ಷಗಳ ಕಾಲ ಆಡಳಿತ ಮೊಕ್ತೇಸರ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಎ.ಸಿ.ಭಂಡಾರಿ ಅವರಿಗೆ ಪೌರ ಸನ್ಮಾನ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಮತ್ತು ನೇತ್ರಾವತಿ ಯುವಕ ಮಂಡಲ ವತಿಯಿಂದ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಕ್ಷೇತ್ರ ನಂದಾವರದ ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ ಭಟ್ ಮಾತನಾಡಿ, ಎ.ಸಿ.ಭಂಡಾರಿ ಅವರು ಕ್ಷೇತ್ರದ ಅಭಿವೃದ್ಧಿ ಕುರಿತು ಸೇವಾ ಸಮಿತಿಯ ಇತರ ಸದಸ್ಯರೊಡಗೂಡಿ ನಡೆಸಿದ ಕೆಲಸಗಳನ್ನು ಸ್ಮರಿಸಿದರು.
ಸನ್ಮಾನಕ್ಕೆ ಉತ್ತರಿಸಿದ ಎ.ಸಿ.ಭಂಡಾರಿ, 1980ನೇ ಇಸವಿಯಿಂದ ಈ ಕ್ಷೇತ್ರದ ಒಡನಾಟ ಹೊಂದಿದ್ದು, ದೇವರ ಪ್ರೇರಣೆಯಿಂದ ಸೇವೆ ನಡೆಸುವ ಅವಕಾಶ ಒದಗಿ ಬಂದಿದೆ.
ಮುಂದೆಯೂ ಕ್ಷೇತ್ರದ ಏಳಿಗೆಗೆ ಬೇಕಾದ ಸಹಕಾರ ನೀಡುತ್ತೇನೆ. ದೇವಸ್ಥಾನದಿಂದ ಪಾಣೆಮಂಗಳೂರು ಕಡೆಗೆ ನೇತ್ರಾವತಿ ಬದಿಯಲ್ಲಿಯೇ ರಸ್ತೆ ನಿರ್ಮಾಣ ಶೀಘ್ರವಾದರೆ, ಪ್ರವಾಸೋದ್ಯಮ ಹಿನ್ನೆಲೆಯಲ್ಲೂ ಕ್ಷೇತ್ರ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ವೇದಮೂರ್ತಿ ಶಿವರಾಮ ಮಯ್ಯ ತನ್ನಚ್ಚಿಲ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕೆಲಿಂಜ ಉಳ್ಳಾಲ್ತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಪಿ.ಶಂಕರನಾರಾಯಣ ಭಟ್, ಉದ್ಯಮಿ ವಿವೇಕ್ ಬಾಳಿಗ, ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷ ಅಶೋಕ ಗಟ್ಟಿ ನಂದಾವರ, ನೇತ್ರಾವತಿ ಯುವಕ ಮಂಡಲ ಅಧ್ಯಕ್ಷ ಚಂದ್ರಶೇಖರ ಕುಲಾಲ್ ಉಪಸ್ಥಿತರಿದ್ದರು.
ಬಿ.ಕೆ.ರಾಜ ನಂದಾವರ ಸನ್ಮಾನಿತರ ಪರಿಚಯ ಮಾಡಿದರು. ಕಾರ್ತಿಕ್ ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಶ್ರೀನಿವಾಸ ಗಟ್ಟಿ ನಂದಾವರ ವಂದಿಸಿದರು.
ಕಲಾವಿದ ರಾಘವೇಂದ್ರ ಕಾರಂತ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಕಳೆದ ಸಾಲಿನ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಗೌರವಿಸಲಾಯಿತು. ಶ್ರೀ ಕ್ಷೇತ್ರದ ವಿನಾಯಕ, ಶಂಕರನಾರಾಯಣ ಮತ್ತು ಶ್ರೀ ದುರ್ಗಾಂಬಾ ದೇವರಿಗೆ ವಿಶೇಷ ರಂಗಪೂಜೆ ನೆರವೇರಿಸಲಾಯಿತು.
Kshetra Samachara
16/10/2020 07:15 pm