ಉಡುಪಿ: ಇತ್ತೀಚಿನ ವರ್ಷಗಳಲ್ಲಿ ಗೋ ಸಂತತಿ ಕಡಿಮೆ ಆಗುತ್ತಿದೆ. ದೇಶಿ ತಳಿಯ ಗೋವುಗಳು ವಿರಳವಾಗುತ್ತಿವೆ.ಹೀಗಾಗಿ ಅಳಿವಿನಂಚಿನ, ದೇಶಿ ಗೋವುಗಳ ಉಳಿವಿಗಾಗಿ ಪರಭಾರೆ ಆದ ಗೋಮಾಳ ಭೂಮಿಯ ರಕ್ಷಣೆಗಾಗಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿಶೇಷ ಪ್ರಯತ್ನ ಉಡುಪಿಯಲ್ಲಿ ಶುರುವಾಗಿದೆ.
ಹೌದು...ಹಿಂದೆ ಗ್ರಾಮಗಳಲ್ಲಿ ಗೋವುಗಳ ಮೇವಿಗಾಗಿ ಗೋಮಾಳದ ಜಾಗದಲ್ಲಿ ಮೇವುಗಳು ಯಥೇಚ್ಛವಾಗಿ ಸಿಗ್ತಾ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಗೋಮಾಳ ಜಾಗ ಪರಭಾರೆ ಆಗುತ್ತಿದೆ. ಕೆಲವು ಗ್ರಾಮಗಳಲ್ಲಿ ಗೋಮಾಳದ ಜಾಗ ಬೇರೆಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಹೀಗಾಗಿ, ಗೋಮಾಳ ಜಾಗವನ್ನು ಗೋ ಸಾಕಣೆ ಮಾಡಲು ಗೋಶಾಲೆಗಳಿಗೆ ನೀಡಬೇಕು ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥರು ಆಗ್ರಹಿಸಿದ್ದಾರೆ. ಬ್ರಿಟೀಷರ ಕಾಲದಲ್ಲಿ ಗೋಮಾಳ ಗೋಮಾಳ ಆಗಿಯೇ ಉಳಿದಿತ್ತು. ನಂತರದಲ್ಲಿ ಗೋಮಾಳ ಬೇರೆ ಬೇರೆ ಉದ್ದೇಶಕ್ಕೆ ಯಾಕೆ ಬಳಸಲಾಗುತ್ತಿದೆ ಎಂದು ಶ್ರೀಗಳು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಉಡುಪಿ ಜಿಲ್ಲೆಯೊಂದರಲ್ಲೇ 233 ಗ್ರಾಮಗಳಲ್ಲಿ 3 ಸಾವಿರ ಎಕರೆಯಷ್ಟು ಗೋಮಾಳದ ಭೂಮಿಗಳಿದೆ. ಇದನ್ನು ಆಯಾ ಊರಿನ ಗೋವುಗಳ ರಕ್ಷಣೆಗಾಗಿ ಹಾಗೂ ಗೋವುಗಳ ಪಾಲನೆಗಾಗಿ ನೀಡಬೇಕು ಎಂದು ಗೋ ಹಿತರಕ್ಷಣಾ ಒಕ್ಕೂಟ ಒತ್ತಾಯಿಸಿದೆ. ಗ್ರಾಮಗಳ ಗೋಮಾಳವನ್ನು ಗೋವುಗಳ ಪಾಲನೆ ಮತ್ತು ಮೇವಿನ ಉದ್ದೇಶಕ್ಕೆ ವ್ಯವಸ್ಥಿತವಾಗಿ ನೀಡಿಲು ಯೋಜನೆ ರೂಪಿಸಿದೆ. ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಗೋಮಾಳ ರಕ್ಷಣೆಗೆ ಕಾರ್ಯಪ್ರವೃತವಾಗಿದೆ.
ಒಟ್ಟಿನಲ್ಲಿ ಲಾಕ್ ಡೌನ್ ಬಳಿಕ ಉದ್ಯೋಗ ಕಳೆದುಕೊಂಡ ಅನೇಕ ಯುವಕರು ಊರು ಸೇರಿದ್ದಾರೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 5 ಅಥವಾ 10 ಸೆಂಟ್ಸ್ ಜಾಗದಲ್ಲಿ ಮೇವಿನ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಇಂಥವರಿಗೆ ಶ್ರೀಗಳ ಯೋಚನೆ, ಯೋಜನೆ ಕಾರ್ಯಗತವಾದರೆ ಅವರ ಜೀವನಕ್ಕೂ ಆಧಾರವಾಗಬಹುದು ಎಂಬ ನಿರೀಕ್ಷೆ ಇದೆ.
Kshetra Samachara
07/10/2021 05:26 pm