ಮೂಡುಬಿದಿರೆ: ಭಾರತೀಯ ಸಂಸ್ಕೃತಿಯ ಮೂಲ ತತ್ವ ಎಲ್ಲರನ್ನು ಗೌರವದಿಂದ ನೋಡುವುದು. ಈ ಶ್ರೇಷ್ಠ ಪರಂಪರೆಯನ್ನು ಕಾಪಿಡಲು ಆಧುನಿಕ ಜಗತ್ತಿನಲ್ಲಿ ವಿವಿಧ ಕಾನೂನು ಕಟ್ಟಳೆಗಳನ್ನು ಮಾಡಲಾಗಿದೆ ಎಂದು ಮನಃಶಾಂತಿ ಸಮಾಲೋಚನೆ, ತರಬೇತಿ ಹಾಗೂ ಸಂಶೋಧನಾ ಕೇಂದ್ರದ ಕೌನ್ಸಿಲರ್ ಹಾಗೂ ಮೆಂಟಲ್ ಹೆಲ್ತ್ ಪ್ರೊಫೆಷನಲ್ ಡಾ. ರಮೀಲಾ ಶೇಖರ್ ಹೇಳಿದರು.
ಆಳ್ವಾಸ್ ಕಾಲೇಜಿನ ಲೈಂಗಿಕ ಕಿರುಕುಳ ವಿರೋಧಿ ಕೋಶದ ವತಿಯಿಂದ ನಡೆದ ‘’ಟ್ರೈನಿಂಗ್ ಆನ್ ಪೋಶ್’’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯಿದೆ (ಪೋಶ್ ಆ್ಯಕ್ಟ್) ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಕಾನೂನಿನ ಸಂರಕ್ಷಣೆಯಲ್ಲಿ ಮಹಿಳೆಯಂತೆ ಪುರುಷನೂ ಸಮಾನ ಪಾಲುದಾರನು. ಒಬ್ಬ ವ್ಯಕ್ತಿಯನ್ನು ಘನತೆಯಿಂದ ಗೌರವಿಸಲು ನಮ್ಮ ಪುರುಷ ಹಾಗೂ ಮಹಿಳೆಯನ್ನು ಸಜ್ಜುಗೊಳಿಸುವುದು ಮುಖ್ಯ. ನಮ್ಮಲ್ಲಿ ಹಲವಾರು ರೀತಿಯ ಕಾನೂನು ಕ್ರಮಗಳಿದ್ದರೂ ಲೈಂಗಿಕ ಕಿರುಕುಳಗಳು ಇನ್ನೂ ನಡೆಯುತ್ತಿವೆ. ಹಾಗೆಯೇ ಹೆಣ್ಣು ಮಕ್ಕಳಿಗೆ ಎಲ್ಲಾದರೂ ತೊಂದರೆ ಕಾಣಿಸಿಕೊಂಡರೆ ಅವರು ಧ್ವನಿ ಎತ್ತಿ ಮಾತಾಡಬೇಕು. ಮಹಿಳೆ ಎಲ್ಲಾ ಸ್ಥಳದಲ್ಲೂ ನಿರಾತಂಕವಾಗಿ ಜೀವನ ನಿರ್ವಹಿಸುವ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಮೂಲಭೂತವಾಗಿ ಕಾನೂನನ್ನು ರಚಿಸಿದರೂ, ಸಮಾಜದ ಮನಸ್ಥಿತಿ ಬದಲಾಗದ ಹೊರತು, ಯಾವುದೇ ವ್ಯತ್ಯಾಸವಾಗದು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಲೈಂಗಿಕ ಕಿರುಕುಳ ನಡೆದರೂ ಅದನ್ನು ಎದುರಿಸಿ ನಿಲ್ಲುವಂತಹ ಸಾಮರ್ಥ್ಯ ಮಹಿಳೆಯರಲ್ಲಿ ಇರಬೇಕು ಎಂದರು.
ಈ ಸಂದರ್ಭ ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್‌ನ ಸದಸ್ಯೆ ಜಯಶ್ರೀ ಅಮರನಾಥ್ ಶೆಟ್ಟಿ ಹಾಗೂ ಲೈಂಗಿಕ ಕಿರುಕುಳ ವಿರೋಧಿ ಕೋಶದ ಸಂಚಾಲಕಿ ಡಾ. ಸವಿತಾ ಉಪಸ್ಥಿತರಿದ್ದರು.ಡಾ. ಸವಿತಾ ಸ್ವಾಗತಿಸಿ, ವಿದ್ಯಾರ್ಥಿನಿ ಕೀರ್ತನಾ ಕೆ ವಂದಿಸಿ, ಸನಿಕಾ ಎಸ್ ಕುಮಾರ ನಿರೂಪಿಸಿದರು.
Kshetra Samachara
03/09/2022 12:03 pm