ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ನಾರ್ವೆ ಪ್ರಜೆ ಕಣ್ಣಲ್ಲಿ ‌‌‌"ಇನ್ ಕ್ರೆಡಿಬಲ್ ಇಂಡಿಯಾ !"‌; ಮಟ್ಟು- ಪಡುಕರೆ ಸೌಂದರ್ಯ ರಾಶಿಗೆ ಶರಣೆಂದ ವಿದೇಶಿಗ

ವಿಶೇಷ ವರದಿ: ರಹೀಂ ಉಜಿರೆ

ಕಾಪು: ಉಡುಪಿ ಜಿಲ್ಲೆ ಪ್ರಕೃತಿ ರಮಣೀಯ ತಾಣ. ಕಡಲು, ಹಸಿರು ಹೊದ್ದ ಪಶ್ಚಿಮ ಘಟ್ಟ- ನದಿಗಳ ಸಂಗಮ ಈ ಜಿಲ್ಲೆ. ಹಿತ್ತಿಲ ಗಿಡ ಮದ್ದಲ್ಲ ಎಂಬಂತೆ ಜಿಲ್ಲೆಯ ಜನರಿಗೆ ಇಲ್ಲಿಯ ಸೌಂದರ್ಯ ಕಾಣಿಸುತ್ತಿಲ್ಲ.

ಇತ್ತೀಚಿಗೆ ನಾರ್ವೆ ದೇಶದಿಂದ ಬಂದಿದ್ದ ಪ್ರವಾಸಿಗನೊಬ್ಬ ಕಾಪು ತಾಲೂಕಿನ ಮಟ್ಟು- ಪಡುಕರೆ ಕಡಲ ತೀರದಲ್ಲಿ ಸೈಕ್ಲಿಂಗ್ ಮಾಡಿ ರೋಮಾಂಚನಗೊಂಡಿದ್ದಾನೆ. ಇದು ಪ್ರಪಂಚದಲ್ಲೇ ನಾನು ಕಂಡಿರುವ ಅತ್ಯಂತ ಅದ್ಭುತವಾದ ಕಡಲ ತೀರದ ಸೈಕ್ಲಿಂಗ್ ತಾಣ ಎಂದು ಟ್ವಿಟರ್ ನಲ್ಲಿ ಬಣ್ಣಿಸಿದ್ದು, ಈ ಟ್ವೀಟ್ ದೇಶದ ಜನರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳು ಮಾತ್ರವಲ್ಲದೆ, ಉತ್ತರ ಭಾರತದ ಅನೇಕ ಮಾಧ್ಯಮಗಳು ಈ ಬಗ್ಗೆ ಹಾಡಿ ಹೊಗಳಿವೆ.

ಕಾಪು ತಾಲೂಕಿನ ಕಡಲ ಬದಿಯಲ್ಲಿ ಸುಮಾರು 16 ಕಿಲೋಮೀಟರ್ ನಷ್ಟು ನೇರ ರಸ್ತೆಯಲ್ಲಿ ಸಾಗಬಹುದಾದ ಈ ಮಾರ್ಗ, ಸೈಕ್ಲಿಂಗ್ ಮಾಡುವವರಿಗೆ ಒಂದು ಅಪೂರ್ವ ಅನುಭವ ನೀಡುತ್ತದೆ. ಇಕ್ಕೆಲದ ಸಂಚಾರ ಸೇರಿ ಸುಮಾರು 32 ಕಿಲೋಮೀಟರ್ ನಷ್ಟು ದೂರವನ್ನು ಕ್ರಮಿಸುವುದೇ ಒಂದು ರೋಮಾಂಚಕ ಅನುಭವ.

ಎಡಬದಿಯಲ್ಲಿ ಅಬ್ಬರಿಸುವ ಕಡಲು, ಬಲಬದಿಯಲ್ಲಿ ಹರಿಯುವ ಪಾಪನಾಶಿನಿ ನದಿ. ನಡುವಲ್ಲಿ ಸಾಲು ಸಾಲು ತೆಂಗಿನ ತೋಟ. ಇವೆಲ್ಲದರ ನಡುವೆ ಅಗಲ ಕಿರಿದಾದ ಸುಂದರ ಡಾಮರು ರಸ್ತೆ... ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕು ಎಂದು ಪ್ರವಾಸಿಗರಿಗೆ ಅನಿಸದೆ ಇರುವುದಿಲ್ಲ.

ವಿದೇಶಿ ಪ್ರವಾಸಿಗನಿಗೆ ಕಂಡ ಕರ್ನಾಟಕ ಕರಾವಳಿಯ ಮಟ್ಟು ಬೀಚ್ ನಮ್ಮ ಜನಪ್ರತಿನಿಧಿಗಳ ಕಣ್ಣಿಗೆ ಬೀಳದೇ ಇರುವುದು ವಿಪರ್ಯಾಸ. ಈ ಭಾಗದಲ್ಲಿ ವೀಕೆಂಡ್ ಬಂದರೆ ಸೈಕ್ಲಿಂಗ್ ನಡೆಸುವ ಅನೇಕ ಹವ್ಯಾಸಿಗಳಿದ್ದಾರೆ. ರಸ್ತೆಯನ್ನು ಮೇಲ್ದರ್ಜೆಗೇರಿಸಿ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ದೇಶ ಮಾತ್ರವಲ್ಲ, ವಿದೇಶಗಳಿಂದಲೂ ಲಕ್ಷಾಂತರ ಜನ ಇಲ್ಲಿಗೆ ಭೇಟಿ ಕೊಡುವ ಸಾಧ್ಯತೆ ಇದೆ. ಜೊತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿ ಆಗುವುದರಲ್ಲಿ ಸಂಶಯವೇ ಇಲ್ಲ.

Edited By : Shivu K
PublicNext

PublicNext

07/09/2022 08:19 am

Cinque Terre

49.04 K

Cinque Terre

4