ಉಪ್ಪಿನಂಗಡಿ: ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ಮೈದುಂಬಿ ಹರಿಯುತ್ತಿವೆ. ನದಿಗಳ ಉಗಮ ಪ್ರದೇಶದಲ್ಲಿ ಇದೇ ರೀತಿ ಮಳೆಯಾದರೆ ಇಲ್ಲಿ ನೆರೆ ಭೀತಿ ಆವರಿಸಲಿದೆ.
ಕುಮಾರಧಾರ ನದಿಯ ಉಗಮವಾಗುವ ಪ್ರದೇಶವಾದ ಕುಮಾರಪರ್ವತ, ಸುಬ್ರಹ್ಮಣ್ಯ ಭಾಗಗಗಳಲ್ಲಿ ಹಾಗೂ ನೇತ್ರಾವತಿ ನದಿಯು ಉಗಮವಾಗುವ ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಉಭಯ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ.
ನದಿ ತಟದಲ್ಲಿರುವ ಕೃಷಿ ಪ್ರದೇಶಗಳಿಗೆ ಈಗಾಗಲೇ ನೀರು ನುಗ್ಗಿದ್ದು, ಇಲ್ಲಿನ ಎರಡು ನದಿಗಳ ಸಂಗಮ ಸ್ಥಳವಾದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ನೇತ್ರಾವತಿಗೆ ಇಳಿಯಲು ಇರುವ 38 ಮೆಟ್ಟಿಲುಗಳಲ್ಲಿ 25 ಮೆಟ್ಟಿಲುಗಳು ಈಗಾಗಲೇ ಮುಳುಗಿದ್ದು,ಇನ್ನು 13 ಮೆಟ್ಟಿಲುಗಳು ಮುಳುಗಲು ಬಾಕಿ ಇವೆ.
ದೇವಾಲಯದ ಬಳಿ ನದಿಯಲ್ಲಿ ಶಂಭೂರು ಅಣೆಕಟ್ಟಿನವರು ಅಳವಡಿಸಿರುವ ಜಲ ಮಾಪಕದಲ್ಲಿ ನೇತ್ರಾವತಿ ನದಿಯಲ್ಲಿ 28 ಮೀ. ನೀರಿದ್ದು, ಇದರಲ್ಲಿ ನೀರಿನ ಅಪಾಯದ ಮಟ್ಟ 30 ಮೀ. ಆಗಿದೆ. ಈಗ ನದಿಗಳು ಅಗಲವಾಗಿರುವುದರಿಂದ ಈ ಎರಡು ಮೀಟರ್ ಬರಲು ನದಿಯಲ್ಲಿ ತುಂಬಾ ನೀರು ಹರಿದು ಬರಬೇಕಾಗುತ್ತದೆ.
ಇಲ್ಲಿ ನೆರೆ ಬಂದಾಗ ಶ್ರೀ ದೇವಾಲಯದ ವಠಾರ, ರಥಬೀದಿ, ಪಂಜಳ, ಹಿರ್ತಡ್ಕ- ಮಠ, ಹಳೆಗೇಟು, ಕಡವಿನ ಬಾಗಿಲು, ಸೂರಪ್ಪ ಕೌಂಪೌಂಡ್, ಕೆಂಪಿಮಜಲು ಹೀಗೆ ನದಿ ಪಾತ್ರದ ಪರಿಸರ, ನದಿಯನ್ನು ಸಂಪರ್ಕಿಸುವ ತೋಡುಗಳುಳ್ಳ ಪ್ರದೇಶಗಳು ಜಲಾವೃತಗೊಳ್ಳುತ್ತವೆ.
Kshetra Samachara
04/07/2022 09:32 pm