ಬೆಳ್ತಂಗಡಿ: ನಾಗರ ಹಾವೊಂದು ಕೋಳಿಗೂಡಿಗೆ ನುಗ್ಗಿ ಎರಡು ಕೋಳಿಗಳನ್ನು ಕಚ್ಚಿ ಸಾಯಿಸಿದೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟ ಸಮೀಪ ನಡೆದಿದೆ.
ಇಂದು ಡೀಕಯ್ಯ ಎಂಬವರ ಮನೆಯ ಕೋಳಿ ಗೂಡಿಗೆ ನಾಗರಹಾವು ನುಸುಳಿ ಎರಡು ಕೋಳಿಗಳನ್ನು ಬಲಿ ತೆಗೆದುಕೊಂಡಿದೆ.
ಈ ವಿಚಾರ ಮನೆಮಂದಿಗೆ ಗೊತ್ತಾಗಿ ಭಯದಿಂದ ಮಧ್ಯಾಹ್ನ ಬೆಳ್ತಂಗಡಿಯ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿ ಮನೆಗೆ ಕರೆಸಿದ್ದಾರೆ.
ಕಾರ್ಯಾಚರಣೆ ವೇಳೆ, ಸುಮಾರು 5 ಅಡಿಯಷ್ಟಿದ್ದ ನಾಗರ ಹಾವು ಕೋಳಿಗೂಡಿನಿಂದ ಹೊರಬಂದು ಸರಕ್ಕನೇ ಸ್ನೇಕ್ ಅಶೋಕ್ ಅವರತ್ತ ಭುಸ್ ಗುಡುತ್ತಲೇ ದೌಡಾಯಿಸಿ ಕಚ್ಚಲು ಮುಂದಾಗಿದೆ. ಈ ಸಂದರ್ಭ ಜಾಗೃತರಾಗಿಯೇ ಇದ್ದ ಅಶೋಕ್, ತನ್ನ ಕೈಯಲ್ಲಿದ್ದ ಕೋಲಿನ ಸಹಾಯದಿಂದ ನಾಗರನ ಪ್ರಹಾರವನ್ನು ತಪ್ಪಿಸುವಲ್ಲಿ ಅದೃಷ್ಟವಶಾತ್ ಯಶಸ್ವಿಯಾದರು. ಇಂತಹ ನಾಜೂಕಿನ ಪರಿಸ್ಥಿತಿಯಲ್ಲೂ ಅಶೋಕ್ ಚಾಕಚಕ್ಯತೆಯಿಂದ ಸಿಟ್ಟಿಗೆದ್ದಿದ್ದ ನಾಗರಹಾವನ್ನು ಕೈಯಾರೆ ಹಿಡಿದು, ಡಬ್ಬದಲ್ಲಿ ಅದನ್ನು ಹಾಕಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Kshetra Samachara
24/04/2022 09:45 pm