ಮಲ್ಪೆ: ಉಡುಪಿಯ ಮಲ್ಪೆ ಬಂದರಿನಲ್ಲಿ ನೋಡಲು ಭಯಾನಕವಾಗಿ ಕಾಣುವ ಅಪರೂಪದ ಮೀನು ಪತ್ತೆಯಾಗಿದೆ! ತನ್ನ ಗಾತ್ರ ಮಾತ್ರವಲ್ಲದೆ, ನೋಡಲು ಕೂಡ ವಿಚಿತ್ರವಾಗಿ ತೋರುವ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಸಹಿತ ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.
ಆಳಕಡಲಿಗೆ ಮೀನು ಹಿಡಿಯಲು ತೆರಳಿದ್ದ ʼಸೀ ಕ್ಯಾಪ್ಟನ್ʼ ಎಂಬ ಲೈಲ್ಯಾಂಡ್ ಬೋಟ್ ನವರು ಬೀಸಿದ ಬಲೆಗೆ ಭಾರಿ ಗಾತ್ರದ ಮೀನು ಸಿಕ್ಕಿದೆ. ಸ್ಥಳೀಯ ಭಾಷೆಯಲ್ಲಿ ʼಗರಗಸ ಮೀನುʼ ಎಂದು ಕರೆಯಲಾಗುತ್ತಿದ್ದು, ಗರಗಸ ಶಾರ್ಕ್ ಎಂದೂ ಹೇಳುತ್ತಾರೆ.
ಹತ್ತು ಅಡಿಗೂ ಅಧಿಕ ಉದ್ದದ ಮೀನಿನ ಬಾಯಿ ಬಳಿ ಗರಗಸ ಮಾದರಿಯ ಮೊನಚಾದ ಹಲ್ಲುಗಳಿವೆ. ಕ್ರೈನ್ ಮೂಲಕ ಎತ್ತಿ, ಸದ್ಯ ಈ ಮೀನಿನ ವಿಲೇವಾರಿ ಮಾಡಲಾಗಿದೆ. ಅಪಾಯದ ಅಂಚಿನಲ್ಲಿರುವ ಈ ಮೀನನ್ನು, ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳ ಅನುಸಾರ ಅನುಬಂಧ 1ರಲ್ಲಿ ಗುರುತಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
PublicNext
10/03/2022 08:20 pm