ಪುತ್ತೂರು: ಮಳೆಗಾಲ ಮುಗಿದ ಬಳಿಕ ಬೇಸಿಗೆ ಬಿಸಿಯಲ್ಲಿ ಶಾಲೆಯಲ್ಲಿ ಮಕ್ಕಳು ಪಾಠ ಕೇಳೋದು ತ್ರಾಸದಾಯಕವೇ ಹೌದು. ಸರಕಾರಿ, ಖಾಸಗಿ ಸಹಿತ ಬಹುತೇಕ ಎಲ್ಲ ಶಾಲೆಗಳೂ ಕಾಂಕ್ರೀಟ್ ಕಟ್ಟಡಗಳೇ ಆಗಿದ್ದು, ಬೇಸಿಗೆಯಲ್ಲಿ ಎಲ್ಲ ಶಾಲೆಗಳ ಗೋಳೂ ಇದೇ ಆಗಿದೆ.
ಆದರೆ, ದ.ಕ. ಜಿಲ್ಲೆಯ ಈ ಶಾಲೆ ಮಕ್ಕಳಿಗೆ ಮಾತ್ರ ಇಂಥ ಬಿಸಿಲಿನ ತಲೆಬಿಸಿಯಿಲ್ಲ. ಈ ಶಾಲೆಯಲ್ಲಿ ಗಿಡ ಬಳ್ಳಿಗಳಿಂದಲೇ ಮುಚ್ಚಲ್ಪಟ್ಟ ಹಸಿರು ಹೊದಿಕೆ ರಂಗಮಂಟಪವಿದ್ದು, ದಿನಕ್ಕೆ ಒಂದೆರಡು ಗಂಟೆ ಇದೇ ಹಸಿರ ಹೊದಿಕೆಯಲ್ಲಿ ಕೂಲ್ ಆಗಿ ತರಗತಿ ಕೇಳುವ ವ್ಯವಸ್ಥೆ ಶಾಲೆಯಲ್ಲಿದೆ.
ಪುತ್ತೂರು ತಾಲೂಕು ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿಶೇಷ ತರಗತಿ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಈ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಡೆಸಲು ಕೊಠಡಿ ಸಮಸ್ಯೆ ಎದುರಾದಾಗ ಸ್ಥಳೀಯ ಕೃಷಿಕರ ಸಹಾಯದಿಂದ ತೆಂಗಿನ ಹಾಗೂ ಅಡಿಕೆ ಗರಿ ಬಳಸಿ ಕ್ಲಾಸ್ ರೂಂ ನಿರ್ಮಿಸಿ ಈ ಶಾಲೆ ಗಮನ ಸೆಳೆದಿತ್ತು.
ಬಿರುಬಿಸಿಲಿಗೆ ತಂಪನ್ನೆರೆಯುವ ಈ ಕ್ಲಾಸ್ ರೂಂನಲ್ಲಿ ಕುಳಿತುಕೊಳ್ಳಲು ವಿದ್ಯಾರ್ಥಿಗಳು ಖುಷಿ ಪಡುತ್ತಿದ್ದಾರೆ. ಇದೇ ಶಾಲೆಯಲ್ಲಿ ಇದೇ ರೀತಿಯ ಪ್ರಕೃತಿದತ್ತ ಕ್ಲಾಸ್ ರೂಂ ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಶಾಲಾ ರಂಗಮಂಟಪದಲ್ಲೂ ಮಕ್ಕಳಿಗೆ ಪಾಠ ಕೇಳುವ ಅವಕಾಶ ಕಲ್ಪಿಸಲಾಗಿದೆ.
ಇತರ ಶಾಲೆಗಳ ರಂಗಮಂದಿರಗಳಿಗಿಂತ ವಿಭಿನ್ನವಾಗಿರುವ ಈ ರಂಗಮಂದಿರದ ಮೇಲ್ಫಾವಣಿ ಸಂಪೂರ್ಣ ಹಸಿರ ಬಳ್ಳಿಗಳಿಂದಲೇ ತುಂಬಿದೆ. ಈ ಕಾರಣಕ್ಕಾಗಿ ಪ್ರತಿ ತರಗತಿ ಮಕ್ಕಳಿಗೂ ದಿನಕ್ಕೆ ಒಂದೋ, ಎರಡೋ ಗಂಟೆ ಕಾಲ ಇದೇ ಹಸಿರ ರಂಗಮಂಟಪದಲ್ಲಿ ಪಾಠ ಮಾಡಲಾಗುತ್ತಿದೆ.
ಫ್ಯಾಷನ್ ಫ್ಲೋರಾ, ಡೆನ್ ಬರ್ಜಿಯಾ, ಗ್ರ್ಯಾಂಡಿ ಫ್ಲೋರಾ ಮತ್ತು ಫ್ಯಾಷನ್ ಫ್ರೂಟ್ ಬಳ್ಳಿಗಳನ್ನು ಮೇಲ್ಫಾವಣಿಗೆ ಬಿಡಲಾಗಿದೆ. ನಾಲ್ಕು ವರ್ಷದ ಅವಧಿಯಲ್ಲೇ ಸಮೃದ್ಧವಾಗಿ ಬೆಳೆದು ಮೇಲ್ಫಾವಣಿ ತುಂಬಾ ಅವರಿಸಿಕೊಂಡಿರುವ ಈ ಬಳ್ಳಿಗಳು ವಿವಿಧ ಪಕ್ಷಿಗಳಿಗೂ ವಾಸಸ್ಥಾನ. ಈ ಗಿಡ ಬಳ್ಳಿಗಳನ್ನು ರಂಗಮಂಟಪದ ಮೇಲ್ಫಾವಣಿಗೆ ಹಾಕಿದ ಬಳಿಕ ಶಾಲಾ ಕಾರ್ಯಕ್ರಮಕ್ಕಾಗಿ ಪ್ರತಿವರ್ಷ ಶಾಮೀಯಾನಕ್ಕೆ ನೀಡುವ 2 ಸಾವಿರದಷ್ಟು ಹಣವೂ ಉಳಿತಾಯವಾಗುತ್ತದೆ.
Kshetra Samachara
18/11/2021 09:18 am