ಮುಲ್ಕಿ: ಮುಲ್ಕಿ ನಪಂ ವ್ಯಾಪ್ತಿಯ ಕೆಎಸ್ ರಾವ್ ನಗರ ಲಿಂಗಪ್ಪಯ್ಯಕಾಡು ಆಶ್ರಯ ಕಾಲೊನಿಯಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆ ಕುಸಿತವಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.
ಈ ಪರಿಸರ ಹಗಲು ಹೊತ್ತು ಮಕ್ಕಳು ಆಟವಾಡುವ ಜಾಗವಾಗಿದ್ದು, ರಾತ್ರಿಯಾಗಿದ್ದರಿಂದ ಭಾರಿ ದುರಂತ ತಪ್ಪಿದೆ. ಕುಸಿತವಾದ ರಸ್ತೆಬದಿ ಎರಡು ವಾಹನಗಳಿದ್ದು, ಅದೃಷ್ಟವಶಾತ್ ಹಾನಿಗೊಂಡಿಲ್ಲ. ಇಲ್ಲಿನ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ.
ಅನೇಕ ಬಾರಿ ಈ ವಿದ್ಯುತ್ ಕಂಬವನ್ನು ತೆರವುಗೊಳಿಸಲು ಮುಲ್ಕಿ ಮೆಸ್ಕಾಂ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರೂ ಇದುವರೆಗೂ ತೆರವುಗೊಳಿಸಿಲ್ಲ ಎಂದು ಸ್ಥಳೀಯ ನಾಗರಿಕ ರಿಯಾಜ್ ಆರೋಪಿಸಿದ್ದಾರೆ.
ಇದೇ ಪರಿಸರದಲ್ಲಿನ ಎರಡು ಕೊಳಚೆನೀರಿನ ಇಂಗು ಗುಂಡಿಗಳಿದ್ದರೂ ಮಳೆನೀರು ಗುಂಡಿಯೊಳಗೆ ಹರಿದು ಇಂಗದೆ, ತುಂಬಿ ತುಳುಕಿ ರಸ್ತೆ ಬದಿ ಹರಿದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ ಎಂದವರು ಹೇಳಿದ್ದಾರೆ.
ಕೂಡಲೇ ಮುಲ್ಕಿ ನಪಂ. ಮುಖ್ಯಾಧಿಕಾರಿಗಳು ರಸ್ತೆ ಕುಸಿತ ಸ್ಥಳಕ್ಕೆ ಭೇಟಿ ನೀಡಿ ರಸ್ತೆಬದಿ ತಡೆಗೋಡೆ ನಿರ್ಮಿಸುವುದರ ಜೊತೆಗೆ ಇಂಗುಗುಂಡಿಯನ್ನು ಸ್ಥಳಾಂತರ ಗೊಳಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಸಾಮಾಜಿಕ ಕಾರ್ಯಕರ್ತ ಸಮೀರ್ ಎಎಚ್, ಮುಲ್ಕಿ ನಪಂ ಮಾಜಿ ಸದಸ್ಯ ಬಶೀರ್ ಕುಳಾಯಿ ಭೇಟಿ ನೀಡಿ, ಪರಿಶೀಲಿಸಿದರು.
Kshetra Samachara
15/11/2021 04:53 pm