ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಭಾರಿ ಗಾಳಿ-ಮಳೆ, ನೆರೆ ಹಾವಳಿ: ಭತ್ತ ಕೃಷಿ ನೀರುಪಾಲು, ಆತಂಕ

ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಬಯಲು ಪ್ರದೇಶದಲ್ಲಿ ನೆರೆ ಉಂಟಾಗಿದ್ದು ಅಪಾರ ಕೃಷಿ ಹಾನಿ ಸಂಭವಿಸಿದೆ. ಮುಲ್ಕಿ ಹೋಬಳಿಯ ಅತಿಕಾರಿಬೆಟ್ಟು, ಪಕ್ಷಿಕೆರೆ, ಕೆಮ್ರಾಲ್, ಪಂಜ, ಕೊಯಿಕುಡೆ, ಹಳೆಯಂಗಡಿ, ತೋಕೂರು, ಪಾವಂಜೆ , ಕೊಳುವೈಲು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಅಪಾರ ಕೃಷಿ ಹಾನಿಯಾಗಿದೆ.

ಬಿರುಸಿನ ಮಳೆಗೆ ಅತಿಕಾರಿಬೆಟ್ಟು ಗ್ರಾ.ಪಂ. ನ ಕೊಲಕಾಡಿ ಬಳಿ ಬೃಹತ್ ಗಾತ್ರದ ಆಲದ ಮರ ಬಿದ್ದು ರಾಜೇಶ್ ಎಂಬವರ ಹಾಲೋ ಬ್ಲಾಕ್ ನ ಕಾರ್ಮಿಕರ ಶೆಡ್ ಗೆ ಹಾಗೂ ಮರದ ಕೆಳಗಡೆ ನಿಲ್ಲಿಸಿದ್ದ ಕಾರಿಗೆ ಹಾನಿಯಾಗಿ ಸುಮಾರು 2 ಲಕ್ಷ ರೂ. ನಷ್ಟ ವಾಗಿದೆ. ಸ್ಥಳಕ್ಕೆ ಅತಿಕಾರಿಬೆಟ್ಟು ಗ್ರಾಪಂ ಮಾಜಿ ಸದಸ್ಯ ಮನೋಹರ ಕೋಟ್ಯಾನ್ ಹಾಗೂ ಗ್ರಾಮಕರಣಿಕ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಳೆಗೆ ಪಡುಪಣಂಬೂರು ತೋಕೂರು ರಸ್ತೆಯ ಕಲ್ಲಾಪು, ಮಾಗಂದಡಿ ಬಳಿ ಹಾಗೂ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಲೈಟ್ ಹೌಸ್ ರಸ್ತೆ ಮುಳುಗಡೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ತೋಕೂರು ತಿಳಿಸಿದ್ದಾರೆ.

ಮುಲ್ಕಿ ಹೋಬಳಿಯಲ್ಲಿ ನಿರಂತರ ಮಳೆಗೆ ಭತ್ತದ ಪೈರು ನೀರುಪಾಲಾಗಿದ್ದು ಎಕರೆಗಟ್ಟಲೆ ಕೃಷಿ ಹಾನಿಯಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ ಎಂದು ಪಕ್ಷಿಕೆರೆ ಸಾಲುಮರದ ತಿಮ್ಮಕ್ಕ ಅಭಿಮಾನಿ ಬಳಗದ ಮುಖ್ಯಸ್ಥ, ಕೃಷಿಕ ವಾಲ್ಟರ್ ಡಿಸೋಜ ಆತಂಕ ವ್ಯಕ್ತಪಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

14/10/2020 01:49 pm

Cinque Terre

35.8 K

Cinque Terre

0