ಉಡುಪಿ: ಒಂದೆರೆಡು ವರ್ಷಗಳಿಂದ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದರಲ್ಲಿ ನಿವೃತ್ತ ಅಧಿಕಾರಿಗಳು, ಉಪನ್ಯಾಸಕರು ಸೇರಿದಂತೆ ಸುಶಿಕ್ಷಿತರು ಕೂಡ ಸೇರಿದ್ದಾರೆ. ಬಹುತೇಕ ಮಂದಿ ಮಾನಸಿಕ ಖಿನ್ನತೆಗೆ ಒಳಗಾಗಿ ಈ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಿದ್ದಾರೆ.
ಈ ರೀತಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ಇಂದಿನ ಅಗತ್ಯ ವಾಗಿದೆ. ಇದರಲ್ಲಿ ಮಾಧ್ಯಮದವರ ಪಾತ್ರ ಕೂಡ ಮುಖ್ಯವಾಗಿದೆ. ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಮಾಧ್ಯಮದದಲ್ಲಿ ವರದಿ ಮಾಡುವ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು, ಪ್ರೆಸ್ ಕೌನ್ಸಿಲ್ ನಿಯಮಗಳನ್ನು ಪಾಲಿಸುವುದು ಕೂಡ ಅಗತ್ಯ.
ಆದುದರಿಂದ ಈ ಬಗ್ಗೆ ಮಾಧ್ಯಮದವರಿಗಾಗಿ ಉಡುಪಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಮಣಿಪಾಲ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಡಿವಿಜಿ ಪುಣ್ಯ ಸ್ಮರಣೆ ಪ್ರಯುಕ್ತ *‘ಆತ್ಮಹತ್ಯೆ ನಿಯಂತ್ರಣ: ಸಾಮಾಜಿಕ ಜವಾಬ್ದಾರಿ’ ವಿಷಯದ ಕುರಿತು ವಿಚಾರ ಸಂಕಿರಣವನ್ನು ಅ.7ರಂದು ಗುರುವಾರ ಬೆಳಗ್ಗೆ 11ಗಂಟೆಗೆ ಉಡುಪಿ ಪತ್ರಿಕಾ ಭವನದಲ್ಲಿ* ಹಮ್ಮಿಕೊಳ್ಳಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ ಇದರ ಮಾಧ್ಯಮ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಮತ್ತು ಸಹ ಪ್ರಾಧ್ಯಾಪಕಿ ಡಾ.ಶುಭ ಎಚ್.ಎಸ್. ಆಗಮಿಸಲಿರುವರು. ಜಿಲ್ಲಾ ಕಾರ್ಯ ನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಉಪಸ್ಥಿತರಿರುವರು.
ಈ ಕಾರ್ಯಕ್ರಮವನ್ನು ಇಡೀ ರಾಜ್ಯದ ಪತ್ರಕರ್ತರು ಹಾಗೂ ಟಿವಿ ಮಾಧ್ಯಮದವರು ವೀಕ್ಷಿಸಲು ಅನುಕೂಲವಾಗುವಂತೆ *ಯೂಟ್ಯೂಬ್‌ನಲ್ಲಿ ನೇರ ಪ್ರಸಾರ* ಮಾಡಲಾಗುವುದು. ಯೂಟ್ಯೂಬ್ ಲಿಂಕ್ ಈ ಕೆಳಗೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಅಗತ್ಯ ಮಾಹಿತಿ ಪಡೆದುಕೊಂಡು ಯಶಸ್ವಿಗೊಳಿಸುವಂತೆ ವಿನಂತಿ.
Kshetra Samachara
06/10/2021 05:26 pm