ಮಂಗಳೂರು: ಇಂದು ವಿಶ್ವದಾದ್ಯಂತ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಸೆಲೆಬ್ರಿಟಿಗಳಿಂದ ತೊಡಗಿ ರಾಜಕೀಯ ಧುರೀಣರು, ಸೈನಿಕರು, ಜನಸಾಮಾನ್ಯರು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಆದರೆ ಮಂಗಳೂರಿನಲ್ಲೊಬ್ಬ 'ಯೋಗವೀರ' ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು 'ಯೋಗ' ಮಾಡಿ ವಿಶಿಷ್ಟ ರೀತಿಯಲ್ಲಿ ಯೋಗ ದಿನವನ್ನು ಆಚರಿಸಿದ್ದಾರೆ.
ಹೌದು... ವೇವ್ ಸರ್ಫ್ ಸ್ಕೂಲ್ ಆ್ಯಂಡ್ ಕೆಫೆ ಮಾಲೀಕ ಅನೀಶ್ ಪಣಂಬೂರು ವಿಶಿಷ್ಟ ರೀತಿಯಲ್ಲಿ ಯೋಗ ಮಾಡಿ ಸೈ ಎನಿಸಿಕೊಂಡವರು. ಅವರು ಇಂದು ಬೆಳಗ್ಗೆ ತಣ್ಣೀರುಬಾವಿ ಬೀಚ್ ಮುಂಭಾಗದ ಫಲ್ಗುಣಿ ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ನಲ್ಲಿ ನಿಂತು ಯೋಗ, ಸೂರ್ಯ ನಮಸ್ಕಾರ ಪ್ರದರ್ಶಿಸಿದರು. ನೆಲದ ಮೇಲೆ ನಿಂತು ಎಲ್ಲರೂ ಯೋಗ ಮಾಡುತ್ತಾರೆ. ಆದರೆ, ಯಾರೂ ನದಿಯಲ್ಲಿ ಈ ರೀತಿಯಲ್ಲಿ ಶೀರ್ಷಾಸನ ಯೋಗ, ಸೂರ್ಯ ನಮಸ್ಕಾರ ಮಾಡಿಲ್ಲ. ಅನೀಶ್ ಪಣಂಬೂರು ಇಂತಹ ಸಾಧನೆ ಮಾಡಿದ್ದಾರೆ.
ಹರಿಯುವ ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು ಯೋಗ ಮಾಡೋದು ಅಷ್ಟೊಂದು ಸುಲಭವಲ್ಲ. ಇಲ್ಲಿ ದೇಹದ ಬ್ಯಾಲೆನ್ಸ್ ಕಾಯ್ದುಕೊಂಡು ನೀರಿಗೆ ಬೀಳದಂತೆ ಯೋಗ ಮಾಡಬೇಕಾಗುತ್ತದೆ. ಇದಕ್ಕೆ ಏಕಾಗ್ರತೆ ಬಲು ಮುಖ್ಯ. ಆದರೆ, ಅನೀಶ್ ಸತತ ಪ್ರಯತ್ನದ ಮೂಲಕ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು ಯಶಸ್ವಿಯಾಗಿ ಯೋಗ ಮಾಡಿದ್ದಾರೆ. ಅನೀಶ್, ಸರ್ಫಿಂಗ್ ಕೋಚ್ ಆಗಿದ್ದು, ವಿದ್ಯಾರ್ಥಿಗಳಿಗೆ ಸರ್ಫಿಂಗ್ ಕಲಿಸುತ್ತಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
PublicNext
21/06/2022 02:16 pm