ಮಂಗಳೂರು: ಕರ್ತವ್ಯದಲ್ಲಿದ್ದ ಪೋಸ್ಟ್ ಮ್ಯಾನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರನೇ ಜೆಎಂಎಫ್‌ಸಿ ನ್ಯಾಯಾಲಯವು ಅಪರಾಧಿ ಯುವಕನಿಗೆ 10 ತಿಂಗಳ ಸಾದಾ ಸಜೆ ಹಾಗೂ 2,500 ರೂ. ದಂಡ ವಿಧಿಸಿ ಆದೇಶಿಸಿದೆ.
2020ರ ಜೂನ್ 16ರ ಬೆಳಗ್ಗೆ 10.15ಕ್ಕೆ ಬೋಳೂರಿನ ಮಠದಕಣಿ ರಸ್ತೆಯ ಮನೆಯಲ್ಲಿರುವ ಆರೋಪಿ ಮನೀಶ್ ಮನೆಗೆ ರಿಜಿಸ್ಟರ್ ಪೋಸ್ಟ್ ಬಟವಾಡೆ ಮಾಡಲು ಪೋಸ್ಟ್ ಮ್ಯಾನ್ ದಿನೇಶ್ ಅವರು ಹೋಗಿದ್ದರು. ಆಗ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪಿ ಮನೀಶ್ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಅಂಚೆ ಇಲಾಖೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಹರಿದು ಹಾಕಿ ದಿನೇಶ್ ಅವರ ಬೈಕ್ ಅನ್ನು ರಾಡ್ ನಿಂದ ಜಖಂಗೊಳಿಸಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬರ್ಕೆ ಠಾಣೆಯ ಅಂದಿನ ಉಪನಿರೀಕ್ಷಕ ಹಾರೂನ್ ಅಖ್ತರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಆರನೇ ಜೆಎಂಎಫ್ ಸಿ ನ್ಯಾಯಾಲಯ ವಾದವಿವಾದವನ್ನು ಆಲಿಸಿ ಆರೋಪಿ ತಪ್ಪಿತಸ್ಥನೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಪೂಜಾಶ್ರೀ ಹೆಚ್.ಎಸ್. ಅಪರಾಧಿಗೆ 10 ತಿಂಗಳ ಸಾದಾ ಸಜೆ ಹಾಗೂ 2,500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದಾರೆ.
Kshetra Samachara
30/09/2022 10:21 am