ಮಂಗಳೂರು: ತಮ್ಮ ದಾಖಲೆ ಪತ್ರಗಳು ಸರಿಯಾಗಿದ್ದಲ್ಲಿ, ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲದಿದ್ದಲ್ಲಿ ತಾವು ಸುರಕ್ಷಿತರು ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ವಿದೇಶಿಯರಿಗೆ ಸೂಚನೆ ನೀಡಿದರು.
ಶಿಕ್ಷಣ, ಉದ್ಯೋಗ ನಿಮಿತ್ತ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದೇಶಿಯರೊಂದಿಗೆ ನಗರದ ರೋಶನಿ ನಿಲಯದ ಸಭಾಂಗಣದಲ್ಲಿ ಸಂವಾದ ನಡೆಸಿದ ಅವರು, ತಮಗೆ ಯಾವುದೇ ರೀತಿ ತೊಂದರೆಯಾದರೆ 112 ಸಂಖ್ಯೆಗೆ ಕರೆ ಮಾಡಿದ್ದಲ್ಲಿ ನೀವು ಕರೆ ಮಾಡಿದ 15 ನಿಮಿಷಗಳೊಳಗಾಗಿ ಪೊಲೀಸರು ನೀವಿದ್ದಲ್ಲಿಗೆ ಬಂದು ನಿಮ್ಮ ಸಮಸ್ಯೆ, ತೊಂದರೆ ಬಗೆಹರಿಸುತ್ತಾರೆ ಎಂದು ವಿದೇಶಿಯರಿಗೆ ಧೈರ್ಯ ತುಂಬಿದರು.
ಶಿಕ್ಷಣ, ಉದ್ಯೋಗ ಕಾರಣದಿಂದ ಸುಮಾರು 50 ದೇಶಗಳ 336 ವಿದೇಶಿ ಪ್ರಜೆಗಳು ಮಂಗಳೂರನ್ನು ಆಶ್ರಯಿಸಿದ್ದಾರೆ. ಅವರಲ್ಲಿ 210 ಪುರುಷರು, 126 ಮಹಿಳೆಯರು. ಇವರಲ್ಲಿ ಇಬ್ಬರು ಪಾಕಿಸ್ತಾನಿಯರೂ ಇದ್ದಾರೆ. ಇವರು 2015ನಿಂದ ಮಂಗಳೂರಿನಲ್ಲಿದ್ದಾರೆ. ಬಾಂಗ್ಲಾದೇಶ, ಇಥಿಯೋಪಿಯಾ, ಇರಾಕ್, ಮಲೇಶಿಯಾ, ಫಿಲಿಫೈನ್ಸ್, ಶ್ರೀಲಂಕಾ, ಯುಎಇ, ಯುಎಸ್ಎ ಮುಂತಾದ ದೇಶಗಳ ಪ್ರಜೆಗಳು ಇಲ್ಲಿ ವಾಸವಾಗಿದ್ದಾರೆ.
ತಮ್ಮನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯವೂ ಹೌದು. ಆದ್ದರಿಂದ ತಮಗೇನಾದರೂ ತೊಂದರೆಯಾದಲ್ಲಿ ತಕ್ಷಣ ಮಂಗಳೂರು ಪೊಲೀಸರನ್ನು ಭೇಟಿಯಾದಲ್ಲಿ ನಿಮ್ಮ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು. ಈ ವೇಳೆ ವಿದೇಶಿ ಪ್ರಜೆಗಳು, ವಿದ್ಯಾರ್ಥಿಗಳು ಪೊಲೀಸ್ ಕಮಿಷನರ್ ಅವರೊಂದಿಗೆ ಸಂವಾದ ನಡೆಸಿದರು.
Kshetra Samachara
02/07/2022 05:59 pm