ಉಡುಪಿ: ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಹಲವು ದಿನಗಳಿಂದ ರಕ್ಷಿಸಿಡಲಾಗಿದ್ದ ವಾರಸುದಾರರಲ್ಲದ ನಾಲ್ಕು ಶವಗಳ ಅಂತ್ಯಸಂಸ್ಕಾರವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಬೀಡಿನಗುಡ್ಡೆಯ ಹಿಂದು ರುದ್ರ ಭೂಮಿಯಲ್ಲಿ ಗೌರವಯುತವಾಗಿ ನಡೆಸಿದರು. ಈ ನಾಲ್ಕು ಶವಗಳ ಅಂತ್ಯಸಂಸ್ಕಾರದೊಂದಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇದು ವರೆಗೆ 200 ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸಿದಂತಾಗಿದೆ.
ವಿಷಯ ತಿಳಿದು ರುದ್ರಭೂಮಿಗೆ ಬಂದ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶೆ ಶರ್ಮಿಳಾ ಎಸ್ ಮೃತ ದೇಹಗಳಿಗೆ ಹೂ ಮಾಲೆ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿ, ಶವಸಂಸ್ಕಾರದಲ್ಲಿಯೂ ಭಾಗಿಯಾದರು. ನಾಲ್ವರಲ್ಲಿ ಇಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ರೋಗಿಗಳಾಗಿದ್ದರು. ಒಂದು ನೀರಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟವನ ಶವ ಮತ್ತು ಇನ್ನೊಂದು ದೊಡ್ಡಣಗುಡ್ಡೆ ರೈಲು ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಶವವಾಗಿತ್ತು. ನಾಲ್ಕು ಅಪರಿಚಿತ ಶವಗಳ ವಾರಸುದಾರರ ಬರುವಿಕೆಗೆ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಕಾಲಮಿತಿ ಕಳೆದರೂ ಮೃತರ ವಾರಸುದಾರರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಿರಲಿಲ್ಲ. ನಂತರ ಕಾನೂನಿನಂತೆ ಅಂತ್ಯಸಂಸ್ಕಾರ ನಡೆಸಲಾಯಿತು.
ನಗರ ಪೋಲಿಸ್ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಮಣಿಪಾಲ ಪೋಲಿಸ್ ಠಾಣೆ ಸಿಬ್ಬಂದಿಗಳಾದ, ಉಮೇಶ್ ಯಾದವ್ ಕಾನೂನು ಪ್ರಕ್ರಿಯೆ ನಡೆಸಿದರು. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ ಮೇಸ್ತ ಶಿರೂರು, ಸಮಿತಿಯ ಕಾರ್ಯಕರ್ತರಾದ ಪ್ರದೀಪ್ ಅಜ್ಜರಕಾಡು, ಸಂದೇಶ್, ಶಿವಾನಂದ, ಸೌರಭ್ ಬಲ್ಲಾಳ್, ಮೊದಲಾದವರು ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಜಿಲ್ಲಾಸ್ಪತ್ರೆ, ನಗರಸಭೆ, ಫ್ಲವರ್ ವಿಷ್ಣು, ಅಣ್ಣಪ್ಪ ಪುಜಾರಿ ಕರಂಬಳ್ಳಿ, ಸುಶೀಲಾ ರಾವ್ ಸಹಕರಿಸಿದರು.
Kshetra Samachara
18/08/2022 04:21 pm