ಮಂಗಳೂರು: ಸುರತ್ಕಲ್ ಎನ್‌ಐಟಿಕೆ ಬಳಿಯಲ್ಲಿ ಅಕ್ರಮ ಟೋಲ್ ಗೇಟ್ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈಗಾಗಲೇ ಟೋಲ್ ತೆರವು ಮಾಡುವುದಾಗಿ ದಿನಾಂಕದ ಮೇಲೆ ದಿನಾಂಕ ಘೋಷಣೆ ಮಾಡಿದ್ದರೂ ಟೋಲ್ ಮುಚ್ಚಲು ಅವರಿಂದ ಸಾಧ್ಯವಾಗಿಲ್ಲ. ನೂರಾರು ಸಮಾನ ಮನಸ್ಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಜೊತೆ ಸೇರಿ ಸ್ಥಾಪಿಸಿರುವ ಟೋಲ್ ಗೇಟ್ ವಿರೋಧಿ ಸಮಿತಿ ನಡೆಸಿರುವ ಹೋರಾಟಕ್ಕೆ ಸದ್ಯದಲ್ಲೇ ಗೆಲುವು ಸಿಗಲಿದೆ. ಕೆಲವೇ ಸಮಯದಲ್ಲಿ ಟೋಲ್ ಅಲ್ಲಿಂದ ಎತ್ತಂಗಡಿ ಆಗುವುದು ನಿಶ್ಚಿತ.
ಸದ್ಯ ಟೋಲ್ ಗೇಟ್‌ನಲ್ಲಿ 31ಕ್ಕೂ ಹೆಚ್ಚು ಮಂದಿ ಯುವಕ-ಯುವತಿಯರು ಕೆಲಸ ಮಾಡುತ್ತಿದ್ದು, ಟೋಲ್ ತೆರವುಗೊಂಡರೆ ಅವರ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗಲಿದೆ. ಇದನ್ನು ಮನಗಂಡು ಅವರಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ನೀಡುವ ಭರವಸೆಯನ್ನು ನಾನು ನೀಡುತ್ತೇನೆ" ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿ, "ಸುರತ್ಕಲ್ ಟೋಲ್ ಗೇಟ್ ನಲ್ಲಿ ಒಟ್ಟು 31 ಮಂದಿ ಕಾರ್ಮಿಕರು ದುಡಿಯುತ್ತಿದ್ದು ಅವರಲ್ಲಿ ಯುವಕ-ಯುವತಿಯರು ಸೇರಿದ್ದಾರೆ. ಟೋಲ್ ತೆರವುಗೊಳ್ಳುವುದರಿಂದ ಅವರು ಉದ್ಯೋಗ ಕಳೆದುಕೊಳ್ಳಲಿದ್ದು ಕುಟುಂಬಕ್ಕೆ ಆರ್ಥಿಕ ಹೊರೆಬೀಳಲಿದೆ. ಇದನ್ನು ಮನಗಂಡು ಅವರಿಗೆ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ನೀಡಲು ಈಗಾಗಲೇ ವಿವಿಧ ಕಂಪೆನಿಗಳು ಮತ್ತು ಉದ್ಯಮಿಗಳ ಜೊತೆ ಚರ್ಚಿಸಿದ್ದೇನೆ" ಎಂದರು.
ಈಗಾಗಲೇ ಟೋಲ್ ಗೇಟ್ ನಲ್ಲಿ ದುಡಿಯುತ್ತಿರುವ ಕಾರ್ಮಿಕರ ಮೇಲೆ ಹತ್ತಾರು ಕ್ರಿಮಿನಲ್ ಕೇಸ್ ಗಳಿದ್ದು ಟೋಲ್ ತೆರವುಗೊಂಡ ಬಳಿಕ ಅತಂತ್ರ ಸ್ಥಿತಿ ಎದುರಿಸಲಿದ್ದಾರೆ. ಕಾರ್ಮಿಕರು ಮತ್ತವರ ಕುಟುಂಬ ಸದಸ್ಯರು ಸಂಪರ್ಕದಲ್ಲಿದ್ದು ಟೋಲ್ ತೆರವುಗೊಂಡ ತಕ್ಷಣ ಅವರ ಉದ್ಯೋಗ ಭದ್ರತೆಗೆ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದರು.
Kshetra Samachara
15/09/2022 07:06 pm