ಸುಳ್ಯ: ಜೋರಾಗಿ ಮಳೆ ಬಂದರೆ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳ ಭಾಗದ ಜನರ ಮನದಲ್ಲಿ ಆತಂಕದ ಕರಿ ಮೋಡ ಕಟ್ಟಿ ಕೊಳ್ಳುತ್ತಿದೆ.
ಜೋರಾಗಿ ಮಳೆ ಬಂದರೆ ಇಲ್ಲಿನ ಹೊಳೆ ತುಂಬಿ ಹರಿಯುತ್ತದೆ.ಹೊಳೆ ತುಂಬಿ ಹರಿದರೆ ಇವರ ತಾತ್ಕಾಲಿಕ ಮರದ ಕಾಲು ಸೇತುವೆ ಕೊಚ್ಚಿ ಹೋಗುತ್ತದೆ.ಮತ್ತೆ ಎಲ್ಲಾ ಸಂಪರ್ಕ ಕಡಿದುಕೊಂಡು ಹಲವಾರು ಕುಟುಂಬಗಳು ದ್ವೀಪದಲ್ಲಿ ಸಿಲುಕಿದಂತಾಗುತ್ತದೆ. ಮಳೆಗಾಲದಲ್ಲಿ ಈ ಗ್ರಾಮಸ್ಥರ ಪಾಡು ಹೇಳತೀರದು.
ಜೀವನದುದ್ದಕ್ಕೂ ಇವರದ್ದು ಇದೇ ಬವಣೆ. ಈ ಬಾರಿಯ ಮಹಾ ಮಳೆಯಲ್ಲಿ ಹೊಳೆ ತುಂಬಿ ಹರಿದಾಗ ಇವರ ತಾತ್ಕಾಲಿಕ ಕಾಲು ಸೇತುವೆ ಕೊಚ್ಚಿ ಹೋಯಿತು. ನೀರಿನ ರಭಸ, ಹಳ್ಳದಲ್ಲಿ ತೇಲಿ ಬಂದ ಮರದ ತುಂಡು ಬಡಿದು ಕಾಲು ಸೇತುವೆ ನೀರು ಪಾಲಾಯಿತು. ಇದರಿಂದ ನಾಲ್ಕೈದು ದಿನ ಈ ಪ್ರದೇಶದ ಕುಟುಂಬಗಳಿಗೆ ಅಕ್ಷರಷಃ ನಡುಗಡಲಲ್ಲಿ ಬಿಟ್ಟ ಅನುಭವವಾಗಿತ್ತು.
15 ಕ್ಕೂ ಹೆಚ್ಚು ಕುಟುಂಬಗಳು ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದು ಕೊಂಡು ಮನೆಯಿಂದ ಹೊರ ಬರಲಾಗದೆ ಯಾತನೆ ಅನುಭವಿಸಬೇಕಾಗಿ ಬಂತು. ನೀರಿನ ಹರಿವು ಕಡಿಮೆ ಆದ ಬಳಿಕ ವಿಪತ್ತು ನಿರ್ವಹಣಾ ತಂಡ ಮತ್ತು ಸ್ಥಳೀಯರು ಸೇರಿ ಇದೀಗ ತಾತ್ಕಾಲಿಕ ಕಾಲು ಸೇತುವೆ ನಿರ್ಮಾಣ ಮಾಡಲಾಗಿದೆ.
ಅಗತ್ಯ ವಸ್ತುಗಳಿಗಾಗಿ ಹೊಳೆ ದಾಟಿ ಬರಬೇಕು. ಹೊಳೆ ದಾಟಿ ಬರಬೇಕಾದರೆ ಈ ತಾತ್ಕಾಲಿಕ ಸೇತುವೆಯನ್ನೇ ಅವಲಂಬಿಸಬೇಕಾಗಿದೆ. ಸೇತುವೆ ಕೊಚ್ಚಿ ಹೋದರೆ ಇವರು ನಿಜಕ್ಕೂ ಅತಂತ್ರರಾಗಿ ಬಿಡುತ್ತಾರೆ.
ಅಗತ್ಯ ವಸ್ತುಗಳು ಸಿಗುವುದಿಲ್ಲ ಎಂದು ಮಾತ್ರವಲ್ಲದೆ ಆರೋಗ್ಯ ಸಮಸ್ಯೆ ಬಂದರೆ ದೇವರೇ ಗತಿ ಎಂಬ ಸ್ಥಿತಿ ಇದೆ.
ನಮಗೆ ಶಾಶ್ವತ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಈ ಗ್ರಾಮದ ಜನರ ಹಲವು ದಶಕಗಳ ಬೇಡಿಕೆ.
ತಾತ್ಕಾಲಿಕ ಕಾಲು ಸೇತುವೆ ನಿರ್ಮಿಸಲಾಗುತ್ತದೆ. ಶಾಲೆಗೆ ಹೋಗುವ ಪುಟ್ಟ ಮಕ್ಕಳು ಸೇರಿ ಸಾರ್ವಜನಿಕರು ಈ ಕಾಲು ಸಂತುವೆಯನ್ನು ಆಶ್ರಹಿಸಬೇಕು. ಈ ಬಾರಿ ಸುರಿಯುತ್ತಿರುವ ಧಾರಾಕಾರ ಮಳೆ ಜನರ ಬದುಕನ್ನು ದುಸ್ತರ ಮಾಡಿದೆ.
ಮತ್ತೆ ಮಳೆ ಹೆಚ್ಚಾದರೆ ಪುನರ್ ನಿರ್ಮಾಣ ಮಾಡಿರುವ ಸೇತುವೆಯೂ ಕೊಚ್ಚಿ ಹೋಗುವ ಅಪಾಯ ಇದೆ. ಹಾಗಾಗಿ ಶಾಶ್ವತವಾಗಿ ಸೇತುವೆ ನಿರ್ಮಿಸಿ ಕೊಡಿ ಎಂಬುದು ಈ ಪ್ರದೇಶದ ಜನರ ಒಕ್ಕೊರಲ ಬೇಡಿಕೆ.
Kshetra Samachara
14/07/2022 09:05 am