ಮಂಗಳೂರು: ನಗರದ ಮಂಗಳಾದೇವಿ ಬಳಿಯ ಅರೆಕೆರೆಬೈಲು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮ್ಯಾನ್ ಹೋಲ್ ನಿಂದ ಕೊಳಚೆ ನೀರು ಬುಗ್ಗೆಯಂತೆ ಉಕ್ಕಿ ಹರಿಯುತ್ತಿದೆ. ಪರಿಣಾಮ ಪರಿಸರದ ಜನತೆ ಅದೇ ಕೊಳಚೆ ನೀರಿನಲ್ಲಿಯೇ ಓಡಾಟ ನಡೆಸುವ ಸ್ಥಿತಿಯಲ್ಲಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಮಳೆಗಾಲ ಬಂತೆಂದರೆ ಒಳಚರಂಡಿಯ ಕೊಳಚೆ ನೀರು ಬುಗ್ಗೆಯಂತೆ ಚಿಮ್ಮುತ್ತದೆ. ಅಲ್ಲದೆ, ಮ್ಯಾನ್ ಹೋಲ್ ಮುಚ್ಚಳವೂ ನೀರಿನಲ್ಲಿ ಹೊಯ್ದಾಡುತ್ತಿದ್ದು, ಪಾದಚಾರಿಗಳು, ವಾಹನ ಸವಾರರು ಆತಂಕದಲ್ಲಿದ್ದಾರೆ.
ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಪರಿಣಾಮ ಮಳೆ ಬರುವಾಗ ಸರಾಗವಾಗಿ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲ. ಇದರಿಂದ ಮಳೆ ನೀರು ಕೊಳಚೆ ನೀರಿನೊಂದಿಗೆ ಬುಗ್ಗೆಯಂತೆ ಮ್ಯಾನ್ ಹೋಲ್ ನಿಂದ ಹೊರಗೆ ಚಿಮ್ಮುತ್ತಿದೆ. ಆದ್ದರಿಂದ ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಗಿದೆ.
ಈ ಕೊಳಚೆ ನೀರು ಪರಿಸರದಲ್ಲಿನ ಮನೆಯಂಗಳಕ್ಕೂ ನುಗ್ಗುತ್ತಿದ್ದು, ಜನತೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೊರೊನಾ ಸೋಂಕಿಗಿಂತ ಮೊದಲು ಈ ಪ್ರದೇಶ ಡೆಂಘಿನಿಂದ ತತ್ತರಿಸಿತ್ತು.
ಇದೀಗ ಕೊಳಚೆ ನೀರಿನ ಪರಿಣಾಮ ಸೊಳ್ಳೆ ಉತ್ಪತ್ತಿ ತಾಣವಾಗಿ ಮತ್ತೆ ಸ್ಥಳೀಯ ಜನತೆಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್, ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.
Kshetra Samachara
22/06/2022 12:01 pm