ಮೂಡುಬಿದಿರೆ: ಎಳೆ ವಯಸ್ಸಿನಲ್ಲಿ ಯಾವ ಅಭ್ಯಾಸವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೂ ಆದೇ ಅಭ್ಯಾಸ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ತಂಬಾಕಿನಿಂದ ದುಶ್ಚಟಕ್ಕೆ ಒಳಗಾದ ಹಿರಿಯರಿಗೆ ಸಣ್ಣ ವಯಸ್ಸಿನ ಮಕ್ಕಳು ತಿಳಿ ಹೇಳಿದರೆ ಅವರ ಮನಸ್ಸಿಗೆ ಮುಟ್ಟುತ್ತದೆ. ಇದರಿಂದ ತಂಬಾಕು ಸೇವನೆಯಂತಹ ದುರಾಭ್ಯಾಸವನ್ನು ಬಿಟ್ಟರೆ ಸಮಾಜಕ್ಕೆ ನಿಮ್ಮಿಂದ ಉತ್ತಮ ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ನ್ಯಾಚುರೋಪತಿ ವಿಭಾಗದ ಉಪನ್ಯಾಸಕಿ ಡಾ.ಪ್ರಗತಿ ಹೆಗ್ಡೆ ವಿದ್ಯಾರ್ಥಿಗಳಿಗೆ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಿದ್ದಾರೆ.
ಅವರು ಮಂಗಳವಾರ ಸರಕಾರಿ ಪ್ರೌಢಶಾಲೆ ಅಳಿಯರು ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ತಾಲೂಕು, ಶಿರ್ತಾಡಿ ವಲಯ ಹಾಗೂ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟನ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಒಕ್ಕೂಟದ ವಲಯಾಧಿಕಾರಿ ಶ್ರೀಧರ್ ಬಂಗೇರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಂಬಾಕು, ಮದ್ಯಸೇವನೆಯ ಕುರಿತು ವಿದ್ಯಾರ್ಥಿಗಳು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಬೇಕೆಂದರು.
ಮೂಡುಬಿದಿರೆ ತಾಲೂಕು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಮಾತನಾಡಿ, ಇಂದು ಶಾಲಾ ಕಾಲೇಜುಗಳಲ್ಲಿ ದುಶ್ಚಟಗಳಿಂದ ದೂರವಿರಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಅದೆಷ್ಟೋ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಅದನ್ನೇ ಚಟವನ್ನಾಗಿಸಿಕೊಂಡು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ, ಹೀಗಾಗಿ ವಿದ್ಯಾರ್ಥಿಗಳೇ ಇಂದು ತಮ್ಮ ಮನೆಯವರಿಗೆ, ಹಿರಿಯರಿಗೆ ತಂಬಾಕು, ಆಮಲು ಪದಾರ್ಥಗಳನ್ನು ಸೇವಿಸಬಾರದೆಂದು ತಿಳಿ ಹೇಳಬೇಕು, ವಿದ್ಯಾರ್ಥಿಗಳಿಂದಲೇ ಇಂತಹ ಜಾಗೃತಿಯ ಕಾರ್ಯಗಳು ನಡೆಯಬೇಕು ಎಂದರು.
ನಂತರ ಗಣ್ಯರ ಸಮ್ಮುಖದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಜಾಗೃತಿ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಲಕ್ಷ್ಮಣ್ ಸುವರ್ಣ, ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ, ನಾರಾಯಣ ಶೆಟ್ಟಿ, ಮೂಡುಬಿದಿರೆ ಟೆಂಪಲ್ ಟೌನ್ ರೋಟರಿ ಕ್ಲಬ್‌ನ ಅಧ್ಯಕ್ಷ ರಮೇಶ್ ಕುಮಾರ್, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ನಿಯೋಜಿತ ಅಧ್ಯಕ್ಷ ಪ್ರವೀಣ್ ಪಿರೇರಾ, ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ. ವಿ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
31/05/2022 10:09 pm