ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಹುಮಹಡಿ ಕಟ್ಟಡದ ತ್ಯಾಜ್ಯ ನೀರಿನ ಚರಂಡಿ ತೆರವು: ಪಂಚಾಯತ್ ಅಧ್ಯಕ್ಷರ ಕಾರ್ಯಾಚರಣೆಗೆ ಸ್ಥಳೀಯರ ಮೆಚ್ಚುಗೆ

ಮುಲ್ಕಿ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಸಾರ್ವಜನಿಕರ ದೂರಿನ ಅನ್ವಯ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಕಾರ್ಯಾಚರಣೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಬದಿಯ ಬಹುಮಹಡಿ ಕಟ್ಟಡದ ಅಕ್ರಮ ದುರ್ವಾಸನೆಯುಕ್ತ ತ್ಯಾಜ್ಯನೀರಿನ ಚರಂಡಿಯನ್ನು ತೆರವುಗೊಳಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಹಳೆಯಂಗಡಿ ಪಂಚಾಯಿತಿಗೆ ಸವಾಲಾಗಿದ್ದ, ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿಯ ಮಾತಾ ರೆಸಿಡೆನ್ಸಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರಿಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿರಲಿಲ್ಲ. ಇದ್ರಿಂದ ಸುತ್ತಮುತ್ತ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳೀಯ ನೇಕಾರ ಮಹಲ್ ಕಟ್ಟಡದಲ್ಲಿ ವ್ಯಾಪಾರಸ್ಥರಾದ ನಾಗೇಶ್ ಶೆಟ್ಟಿಗಾರ್, ಡಾ.ಜಯಕರ ಮಲ್ಯ ಮತ್ತಿತರರು ಅನೇಕ ಬಾರಿ ಪಂಚಾಯಿತಿಗೆ ದೂರು ನೀಡಿದ್ದರೂ ಬಹುಮಹಡಿ ಕಟ್ಟಡದ ಮಾಲೀಕರು ಪ್ರಭಾವಿ ಪಕ್ಷದ ನಿಕಟವರ್ತಿಗಳಾಗಿದ್ದರಿಂದ ಪಂಚಾಯಿತಿ ಆಡಳಿತ ಮೌನವಾಗಿತ್ತು. ಆದರೆ ಈಗಿನ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸ್ಥಳೀಯರಿಂದ ಮತ್ತೆ ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ಕಾರ್ಯಪ್ರವೃತ್ತರಾಗಿ ಕಟ್ಟಡ ಮಾಲೀಕರಿಗೆ ನಾಗರಿಕರ ದೂರಿನ ಬಗ್ಗೆ ತಿಳಿಸಿ ಸ್ಥಳಕ್ಕೆ ಬರಲು ಹೇಳಿದರೂ ಕಟ್ಟಡದ ಮಾಲೀಕರು ಕ್ಯಾರೇ ಅನ್ನದೇ ಮೌನವಾಗಿದ್ದರು.

ಇದರಿಂದ ಕೂಡಲೇ ಕಾರ್ಯಪ್ರವೃತ್ತರಾದ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ಅಶೋಕ್ ಬಂಗೇರ ಹಾಗೂ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ರವರು ಜೆಸಿಬಿ ಮೂಲಕ ಬಹುಮಹಡಿ ಕಟ್ಟಡದ ತ್ಯಾಜ್ಯನೀರು ಹೋಗುತ್ತಿದ್ದ ಚರಂಡಿಯನ್ನು ಮುಚ್ಚಿಸಿದ್ದಾರೆ ಹಾಗೂ ಪಂಚಾಯತಿಗೆ ತಿಳಿಸದೆ ಬಹುಮಹಡಿ ಕಟ್ಟಡದ ಮಾಲೀಕರು ಚರಂಡಿಯನ್ನು ತೆರೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ದುರ್ವಾಸನೆಯುಕ್ತ ತೆರೆದ ಚರಂಡಿಯಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದ ವ್ಯಾಪಾರಸ್ಥರು ಅಧ್ಯಕ್ಷರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

09/04/2022 04:55 pm

Cinque Terre

12.27 K

Cinque Terre

0