ಮುಲ್ಕಿ: ಮುಲ್ಕಿ-ಮೂಡಬಿದ್ರೆ ರಾಜ್ಯ ಹೆದ್ದಾರಿಯ ಕಾರ್ನಾಡು ಗಾಂಧಿ ಮೈದಾನದ ಕುದ್ಕಪಲ್ಲ ಕ್ರಾಸ್ ಬಳಿ ಭಾರಿ ಗಾತ್ರದ ಹೊಂಡ ಕಳೆದ ಕೆಲವು ತಿಂಗಳಿನಿಂದ ಅಪಾಯಕಾರಿಯಾಗಿ ಗೋಚರಿಸುತ್ತಿದೆ.
ಕಳೆದ ಮಳೆಗಾಲದಲ್ಲಿ ಮುಲ್ಕಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಕಾರ್ನಾಡು ಬಳಿಯ ಕಾಂಕ್ರೀಟ್ ರಸ್ತೆ ಕೊನೆಗೊಳ್ಳುವ ಸ್ಥಳದಲ್ಲಿ ಭಾರಿ ಗಾತ್ರದ ಹೊಂಡ ಉಂಟಾಗಿದ್ದು, ಮುಲ್ಕಿ ನಗರ ಪಂಚಾಯತ್ ವತಿಯಿಂದ ತಾತ್ಕಾಲಿಕವಾಗಿ ಕಾಂಕ್ರೀಟಿಕರಣ ತೇಪೆ ನಡೆಸಲಾಗಿತ್ತು. ಆದರೆ ಭಾರಿ ವಾಹನ ಸಂಚಾರದಿಂದ ಹೊಂಡಕ್ಕೆ ಹಾಕಿದ ತೇಪೆ ಕಾಂಕ್ರೀಟ್ ಕಿತ್ತುಹೋಗಿದ್ದು, ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ. ಇದೇ ರೀತಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಇಳಿಜಾರು ರಸ್ತೆ ಬಳಿ ಹೊಂಡ ಉಂಟಾಗಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಿದರೂ ಇದುವರೆಗೂ ಸರಿಪಡಿಸಿಲ್ಲ.
ಈ ಪರಿಸರದಲ್ಲಿ ದಾರಿದೀಪದ ಕೊರತೆ ಉಂಟಾಗಿದ್ದು ರಾತ್ರಿ ಹೊತ್ತು ಅತಿವೇಗವಾಗಿ ಸಂಚರಿಸಿ ಹೊಂಡಕ್ಕೆ ಬಿದ್ದು ಅನೇಕ ದ್ವಿಚಕ್ರ ವಾಹನಗಳ ಸಣ್ಣಪುಟ್ಟ ಅಪಘಾತ ಸಂಭವಿಸಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಹೆದ್ದಾರಿಯ ಹೊಂಡವನ್ನು ದುರಸ್ತಿ ಪಡಿಸುವುದರ ಜೊತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶಂಕರ್ ಪಡಂಗ ಆಗ್ರಹಿಸಿದ್ದಾರೆ.
Kshetra Samachara
22/03/2022 08:58 pm