ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ಕಾಮಗಾರಿ ಚುರುಕು

ಬಂಟ್ವಾಳ: ಆದರ್ಶ ಯೋಜನೆಯಡಿ ಸುಮಾರು 5.5 ಕೋಟಿ ರೂಗೂ ಅಧಿಕ ವೆಚ್ಚದಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ. ಇದರ ಜೊತೆಗೆ ಒಂದು ಪ್ಲಾಟ್ ಫಾರ್ಮ್ ನಿಂದ ಇನ್ನೊಂದು ಪ್ಲಾಟ್ ಫಾರ್ಮ್ ಗೆ ಸಾಗಲು ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

ಕೊರೊನಾ ಕಾರಣದಿಂದ ವಿಳಂಬವಾದರೂ ಅಕ್ಟೋಬರ್ ತಿಂಗಳಲ್ಲಿ ಮತ್ತೆ ಕಾಮಗಾರಿಗೆ ವೇಗ ಪಡೆದುಕೊಂಡಿತು. ಈಗಾಗಲೇ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ವಿಸ್ತರಣೆ, ಮೇಲೆ ಸೂರು, ಶೌಚಾಲಯ, ಪ್ಲಾಟ್ ಫಾರ್ಮ್ ಗೆ ನೆಲಹಾಸು ಸಹಿತ ಹಲವು ಕಾಮಗಾರಿ ನಡೆದಿವೆ. ಇದು ಅಂದುಕೊಂಡಂತೆ ನಡೆದರೆ, ಬಂಟ್ವಾಳ ರೈಲ್ವೆ ನಿಲ್ದಾಣ ಇನ್ನು ಬಿ.ಸಿ.ರೋಡ್ ಪೇಟೆಗೆ ಮತ್ತಷ್ಟು ಹತ್ತಿರವಾಗಲಿದೆ. ಬಿ.ಸಿ.ರೋಡ್ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ) ಮುಂಭಾಗದಿಂದ ಕೈಕುಂಜೆಯವರೆಗಿನ ವಿಶಾಲವಾದ ಕಾಂಕ್ರೀಟ್ ರಸ್ತೆಯಲ್ಲಿ ಕೇವಲ ಏಳುನೂರು ಮೀಟರ್ ಸಂಚರಿಸಿದರೆ, ರೈಲ್ವೆ ಸ್ಟೇಶನ್ ಲಭ್ಯ. ಸಂಪೂರ್ಣವಾಗಿ ಜನಸಂಚಾರ ಇರುವ ಈ ರಸ್ತೆ ಪೇಟೆಗೂ ಹತ್ತಿರ ಹಾಗೂ ಸುರಕ್ಷಿತ.

ರೈಲ್ವೆ ನಿಲ್ದಾಣದ ಕೈಕುಂಜೆ ಭಾಗದಲ್ಲಿ ವಾಹನಗಳು ಪಾರ್ಕ್ ಮಾಡಲು ಅನುಕೂಲವಾಗುವಂತೆ ಇಂಟರ್ಲಾಕ್ ಹಾಸಿನ ಪ್ರತ್ಯೇಕ ಜಾಗವನ್ನು ಕಲ್ಪಿಸಲಾಗಿದೆ. ಇಲ್ಲಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಬರುವ ವಾಹನಗಳು ನಿಲ್ಲಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೆ, ಮೊದಲನೇ ಪ್ಲಾಟ್ ಫಾರ್ಮ್ ನಲ್ಲಿಳಿದ ಪ್ರಯಾಣಿಕರು ಎರಡನೇ ಪ್ಲಾಟ್ ಫಾರ್ಮ್ ಗೆ ಬಂದರೆ, ಅಲ್ಲಿಂದ ಬಿ.ಸಿ.ರೋಡ್ ಗೆ ನಡೆದುಕೊಂಡು ಹೋಗಲು ಅಥವಾ ತಮಗೆ ಬೇಕಾದ ವಾಹನಗಳಲ್ಲಿ ತೆರಳಲು ಬೇಕಾದ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನೇನಿದ್ದರೂ ಈ ಭಾಗದಲ್ಲಿ ಅನಪೇಕ್ಷಿತರು ಆಗಮಿಸದಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳುವುದು ಹಾಗೂ ಪ್ರಯಾಣಿಕರು ಸುರಕ್ಷಿತವಾಗಿ ಸಂಚರಿಸುವಂತೆ ನಿಗಾ ಇರಿಸುವ ಕಾರ್ಯವಾಗಬೇಕು.

ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಒಟ್ಟು ಎರಡು ಪ್ಲಾಟ್ ಫಾರ್ಮ್ ಗಳಿವೆ. ಪ್ರತಿಯೊಂದು ಪ್ಲಾಟ್ ಫಾರ್ಮ್ ಕೂಡ 600 ಮೀಟರ್ ಉದ್ದವಿರುವಂತೆ ವಿಸ್ತರಣೆ ಕಾರ್ಯ ನಡೆದಿದೆ. ಅಂದರೆ ಸುಮಾರು ೨೬ ಬೋಗಿಗಳ ರೈಲು ಬಂದು ನಿಂತರೆ ಪ್ಲಾಟ್ ಫಾರ್ಮ್ ಪಕ್ಕದಲ್ಲೇ ಎಲ್ಲ ಬೋಗಿಗಳೂ ನಿಲ್ಲಲು ಸಾಧ್ಯವಾಗುತ್ತಿದೆ. ಇದರೊಂದಿಗೆ ಪ್ಲಾಟ್ ಫಾರ್ಮ್ ನ ಕೆಲ ಭಾಗದಲ್ಲಿ ಮೇಲ್ಛಾವಣಿ, ವಿದ್ಯುದ್ದೀಪ, ಅಂಗವಿಕಲರಿಗೆ ವಿಶೇಷ ಶೌಚಗೃಹ, ಹೊಸ ಶೌಚಾಲಯ ಕಾಂಪ್ಲೆಕ್ಸ್ ರಚನೆ, ಪ್ಲಾಟ್ ಫಾರ್ಮ್ ಸುತ್ತಲೂ ಆವರಣಗೋಡೆ ವಿದ್ಯುದ್ದೀಪ, ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಶುದ್ಧೀಕರಿಸಿದ ಕುಡಿಯುವ ನೀರು, ಕಂಪ್ಯೂಟರೀಕೃತ ಮುಂಗಡ ಸೀಟು ಕಾದಿರಿಸುವಿಕೆ ವ್ಯವಸ್ಥೆ ಇದೆ. ಆವರಣ ಗೋಡೆ ನಿರ್ಮಾಣ ಕಾರ್ಯ ಆಗಿದೆ, ಒಂದು ಪ್ಲಾಟ್ ಫಾರ್ಮ್ ನಿಂದ ಇನ್ನೊಂದಕ್ಕೆ ಸಂಪರ್ಕಿಸುವ ಬಂಟ್ವಾಳದ ಪ್ರಯಾಣಿಕರ ಮೇಲ್ಸೇತುವೆ ದಶಕಗಳ ಬೇಡಿಕೆ.

ಇದರಿಂದ ಕೈಕುಂಜೆ ಮೂಲಕವಾಗಿ ಪ್ರಯಾಣಿಕರಿಗೆ ನಡೆದುಕೊಂಡು ಹೋಗುವಷ್ಟು ಸುಲಭದ ದಾರಿಯೂ ದೊರಕುತ್ತದೆ. ರೈಲ್ವೆ ನಿಲ್ದಾಣದ ಸುತ್ತಮುತ್ತ ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಿದರೆ, ಅನಪೇಕ್ಷಿತರ ಚಲನವಲನಗಳ ಕುರಿತು ನಿಗಾ ವಹಿಸಲೂ ಸಾಧ್ಯವಾಗುತ್ತದೆ.

Edited By : PublicNext Desk
Kshetra Samachara

Kshetra Samachara

16/12/2021 03:26 pm

Cinque Terre

8.74 K

Cinque Terre

0

ಸಂಬಂಧಿತ ಸುದ್ದಿ