ಬಜಪೆ: ಕುಪ್ಪೆಪದವು ಗ್ರಾಪಂ ವ್ಯಾಪ್ತಿಯ ಕಿಲೆಂಜಾರು ಗುರ್ಕಾರಗುಡ್ಡೆಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ರುದ್ರಭೂಮಿಗೆ ಮೀಸಲಿಟ್ಟಿರುವ ಜಾಗದ ಪಕ್ಕದಲ್ಲಿ ನಿರ್ಮಾಣವಾಗಲಿರುವ ಘನತ್ಯಾಜ್ಯ ಘಟಕಕ್ಕೆ ಹೋಗಲು ರುದ್ರಭೂಮಿಯ ಜಾಗದಲ್ಲಿ ಗ್ರಾಪಂ ರಸ್ತೆ ನಿರ್ಮಾಣ ಮಾಡಿರುವುದಕ್ಕೆ ರುದ್ರಭೂಮಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಗುರ್ಕಾರಗುಡ್ಡೆಯಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕಾಗಿ ಅರ್ಧ ಎಕರೆ ಜಾಗ ಗುರುತಿಸಿ ಚಿತಾಗಾರಕ್ಕಾಗಿ ಶೆಡ್ ನಿರ್ಮಿಸಲಾಗಿದ್ದು, ಇನ್ನುಳಿದ ಅಭಿವೃದ್ಧಿ ಕಾಮಗಾರಿ ನಡೆಸಲು ಸಮಿತಿ ಕಾರ್ಯಪ್ರವೃತ್ತವಾಗಿತ್ತು. ರುದ್ರಭೂಮಿ ಪಕ್ಕದಲ್ಲಿಯೇ ತ್ಯಾಜ್ಯ ವಿಂಗಡಣೆ ಘಟಕ ನಿರ್ಮಾಣಕ್ಕಾಗಿಯೂ ಜಾಗ ಗುರುತಿಸಲಾಗಿತ್ತು.
ಈ ಮಧ್ಯೆ ಗ್ರಾಪಂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಗಮನಕ್ಕೆ ತಾರದೆ ರುದ್ರಭೂಮಿ ಜಾಗದಲ್ಲಿಯೇ ತ್ಯಾಜ್ಯ ಘಟಕಕ್ಕೆ ನಿಗದಿಪಡಿಸಿದ ಜಾಗಕ್ಕೆ ರಸ್ತೆ ನಿರ್ಮಾಣ ಮಾಡಿರುವುದಕ್ಕೆ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುನೀತ್ ಕುಮಾರ್ ಕಟ್ಟೆಮಾರ್ ಆಕ್ಷೇಪಿಸಿದ್ದು, ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಸ್ಥಳಕ್ಕೆ ಗ್ರಾಪಂ ಸದಸ್ಯರಾದ ಮಹಮ್ಮದ್ ಶರೀಫ್ ಕಜೆ, ರಫೀಕ್ ಆಚಾರಿಜೋರ, ಜಿಪಂ ಇಂಜಿನಿಯರ್ ವಿಶ್ವನಾಥ್, ಕುಪ್ಪೆಪದವು ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಜಗದೀಶ್ ಕುಲಾಲ್ ಮತ್ತಿತರರು ಭೇಟಿ ನೀಡಿ, ಪರಿಶೀಲನೆ ನಡೆಸಿದರು
Kshetra Samachara
13/12/2021 08:59 pm