ವರದಿ : ರಹೀಂ ಉಜಿರೆ
ಉಡುಪಿ: ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ಉಡುಪಿ ಜಿಲ್ಲೆಗೆ ನಿತ್ಯ ಹೊರ ಜಿಲ್ಲೆ , ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೆ ನಗರದ ಪ್ರವೇಶ ದ್ವಾರದಲ್ಲೇ ಹೊಂಡ–ಗುಂಡಿಗಳು ಸ್ವಾಗತ ಕೋರುತ್ತವೆ.ನಗರದ ಕರಾವಳಿ ಬೈಪಾಸ್ ನಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ,ನಿತ್ಯ ಟ್ರಾಫಿಕ್ ಜಾಮ್ ಸಂಭವಿಸಿ ಜನತೆಗೆ ಸಾಕಷ್ಟು ತೊಂದರೆಯಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮಂಗಳೂರು ಕಡೆಯಿಂದ ಮಲ್ಪೆ ಹಾಗೂ ಉಡುಪಿಗೆ ಬರುವ ವಾಹನಗಳಿಗೆ ಮೊದಲು ಸ್ವಾಗತ ಕೋರುವುದು ಕರಾವಳಿ ಜಂಕ್ಷನ್‌ನಲ್ಲಿರುವ ದೈತ್ಯ ಗುಂಡಿಗಳು!ಹೀಗಾಗಿ ಇಲ್ಲಿ ನಿತ್ಯ ಟ್ರಾಫಿಕ್ ಜಾಮ್ ತಪ್ಪಿದ್ದಲ್ಲ.ಮಳೆ ಬಂದರೆ ಕರಾವಳಿ ಬೈಪಾಸ್ ಅಕ್ಷರಶಃ ನರಕವಾಗಿ ಮಾರ್ಪಾಡಾಗುತ್ತದೆ.ಉಡುಪಿಯಿಂದ ಮಲ್ಪೆ ಅಥವಾ ಕುಂದಾಪುರಕ್ಕೆ ಹೋಗುವಾಗ ಇಲ್ಲಿ ಅಂಡರ್ ಪಾಸ್ ಸಿಗುತ್ತದೆ.ಈ ಅಂಡರ್ ಪಾಸ್ ದಾಟಲು ಹರಸಾಹಸ ಪಡಬೇಕು! ವಾಹನಗಳನ್ನು ಗುಂಡಿ ತಪ್ಪಿಸಿ ಹೋದರೆ ಬದುಕಿದೆಯಾ ಬಡಜೀವವೇ ಎಂದು ವಾಹನ ಚಾಲಕರು ನಿಟ್ಟುಸಿರು ಇಡುವಂತಾಗಿದೆ.
ಕರಾವಳಿ ಬೈಪಾಸ್ ನ ಅಂಡರ್ ಪಾಸ್ ಮತ್ತು ಫ್ಲೈ ಓವರ್ ನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದ್ದಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ.ವಾಹನ ದಟ್ಟಣೆಯಾಗುತ್ತದೆ ಎಂಬ ಕಾರಣಕ್ಕೆ ಇಲ್ಲಿ ನಾಲ್ಕೈದು ವರ್ಷಗಳ ಹಿಂದೆ ಫ್ಲೈ ಓವರ್ ಮಾಡಲಾಗಿದೆ.ಆದರೆ ಫ್ಲೈ ಓವರ್ ನಿರ್ಮಾಣಕ್ಕೆ ಮುನ್ನ ಇಲ್ಲಿ ಅಂತಹ ಸಮಸ್ಯೆಯೇ ಇರಲಿಲ್ಲ! ಈಗ ಸಮಸ್ಯೆಗೆ ಪರಿಹಾರದ ಬದಲು,ಸಮಸ್ಯೆಯೇ ದುಪ್ಪಟ್ಟಾಗಿದೆ.ಇವತ್ತು ಸಾಮಾಜಿಕ ಕಾರ್ಯಕರ್ತರು ಇಲ್ಲಿ ಬ್ಯಾನರ್ ಅಳವಡಿಸಿದ್ದಾರೆ.ಜನಪ್ರತಿನಿಧಿಗಳು ಇನ್ನೆರಡು ದಿನದೊಳಗೆ ರಸ್ತೆ ಗುಂಡಿ ಮುಚ್ಚದಿದ್ದರೆ ಭಾನುವಾರ ಶ್ರಮದಾನ ಮಾಡಿ ಗುಂಡಿ ಮುಚ್ಚುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಸಮಸ್ಯೆಗೆ ವೈಜ್ಞಾನಿಕವಾಗಿ ಯೋಜನೆ ರೂಪಿಸಿದರೆ ಪರಿಹಾರ ಸಿಗುತ್ತದೆ.ಆದರೆ ಕರಾವಳಿ ಬೈ ಪಾಸ್ ನ ಅಂಡರ್ ಪಾಸ್ ನಗರದ ಜನತೆಗೆ ಸಿಂಹಸ್ವಪ್ನವಾಗಿ ಕಾಡತೊಡಗಿದೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕಿದೆ.
Kshetra Samachara
02/12/2021 06:54 pm