ಮಂಗಳೂರು: ನಗರದಲ್ಲಿ ಸಾರಿಗೆ ಮತ್ತು ಪೊಲೀಸ್ ಇಲಾಖೆ ಸೀಝ್ ಮಾಡಿದ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆಯಿದ್ದು, ಇದರಿಂದಾಗಿ ಮಹಾನಗರ ಪಾಲಿಕೆಯು ನಗರದ ಯಾವ ಭಾಗದಲ್ಲಿ ತೆರೆದ ಜಾಗ ಇದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಮಂಗಳೂರು ನಗರದಲ್ಲಿ ಸ್ಥಳದ ಅಭಾವದಿಂದ ಗುಜರಿ ವಾಹನಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಲಾಗಿದ್ದು, ಇದರಿಂದಾಗಿ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುವುದರ ಜತೆಗೆ ಸಂಚಾರಕ್ಕೂ ತೊಡಕಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಳಲು.
ಕದ್ರಿ, ಬರ್ಕೆ, ಉರ್ವಾ ಪೊಲೀಸ್ ಠಾಣೆಯ ಹೊರಗಡೆ ರಸ್ತೆ ಬದಿ ಜೀಪು, ಲಾರಿ, ಕಾರು, ಬೈಕ್ ಇತ್ಯಾದಿ ನಿರುಪಯುಕ್ತ, ತುಕ್ಕು ಹಿಡಿದ ವಾಹನಗಳನ್ನು ನಿಲ್ಲಿಸಲಾಗಿದೆ.
ಈ ವಾಹನಗಳ ಮೇಲೆಲ್ಲ ಗಿಡಗಳ ಬಳ್ಳಿ ಹರಡಿ ಪೊದೆಯಾಗಿ ಬದಲಾಗಿದೆ. ಪೊಲೀಸರು ಮುಟ್ಟುಗೋಲು ಹಾಕಿದ ವಾಹನಗಳನ್ನು ಈ ಮುಂಚೆ ಕದ್ರಿ ಪಾರ್ಕ್ ರಸ್ತೆಯಲ್ಲಿ ನಿಲ್ಲಿಸಲಾಗುತ್ತಿತ್ತು. ಆದರೆ, ಆ ರಸ್ತೆಯಲ್ಲೀಗ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ.
ನಗರದ ಕೆಲವೊಂದು ಗ್ಯಾರೇಜ್ ಆವರಣಗಳಲ್ಲಿಯೂ ತುಕ್ಕು ಹಿಡಿದ, ನಿರುಪಯೋಗಿ ವಾಹನಗಳನ್ನು ನಿಲುಗಡೆಗೊಳಿಸಲಾಗಿದೆ. ಕೆಲವು ಗ್ಯಾರೇಜ್ ಗಳು ಸಾರ್ವಜನಿಕ ಸ್ಥಳಗಳನ್ನು ದುರ್ಬಳಕೆ ಮಾಡಿಕೊಂಡು, ವಾಹನ ನಿಲುಗಡೆ ಮಾಡುತ್ತಿವೆ!
Kshetra Samachara
17/09/2021 10:18 am