ಬಜಪೆ: ಬಜಪೆ ಸಮೀಪದ ಕತ್ತಲ್ ಸಾರ್ ನ ನೀರಕಡಿ ಯಿಂದ ಕಾರಡ್ಕ ಸಂಪರ್ಕಿಸುವ ರಸ್ತೆಯಲ್ಲಿ ದಾರಿ ದೀಪದ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರಿಗೆ ರಾತ್ರಿ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕಷ್ಟಕರವಾಗಿದೆ. ಕತ್ತಲ್ ಸಾರ್ ನ ನೀರಕಡಿ - ಕಾರಡ್ಕ ರಸ್ತೆಯು ಪ್ರಸಿದ್ದ ಗುಹಾಲಯ ಕ್ಷೇತ್ರ ಶ್ರೀ ಕ್ಷೇತ್ರ ನೆಲ್ಲಿತೀರ್ಥಕ್ಕೆ ಸಂಪರ್ಕಿಸುವ ರಸ್ತೆಯಾಗಿದೆ.ನೀರಕಡಿ ಹಾಗೂ ಕಾರಡ್ಕ ಪ್ರದೇಶಗಳಲ್ಲಿ ಹಲವು ಮನೆಗಳಿದ್ದು, ಉತ್ತಮ ರಸ್ತೆ ಸಂಪರ್ಕವಿದೆ.ಆದರೆ ರಸ್ತೆಯಲ್ಲಿ ಮಾತ್ರ ದಾರಿದೀಪದ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರಿಗೆ ರಾತ್ರಿ ಸಮಯದಲ್ಲಿ ಕತ್ತಲೆಯಲ್ಲಿಯೇ ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಉಂಟಾಗಿದೆ.
ನೀರಕಡಿಯಿಂದ ಕಾರಡ್ಕ ರಸ್ತೆಯ ಸಮೀಪ ಕೆಲ ಕಡೆಗಳಲ್ಲಿ ಗುಡ್ಡ ಕಾಡುಗಳಿಂದಲೇ ಕೂಡಿದ ಪ್ರದೇಶವಾಗಿದೆ.ಸಂಜೆಯ ವೇಳೆಗೆ ಕಾಡು ಪ್ರಾಣೆಗಳ ಕಾಟವು ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು.ರಸ್ತೆ ಯಲ್ಲಿ ನಡೆದು ಕೊಂಡು ಹೋಗಲು ಭಯದ ವಾತಾವರಣ ನಿರ್ಮಾಣ ವಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕೆಲ ತಿಂಗಳುಗಳ ಹಿಂದೆ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾಡು ಹಗಲಲ್ಲೇ ಕಾಡುಕೋಣವೊಂದು ಕಾಣ ಸಿಕ್ಕಿದೆ.ಸುಮಾರು 50 ವರ್ಷಗಳಿಂದ ದಾರಿದೀಪದ ವ್ಯವಸ್ಥೆನೇ ಇಲ್ಲದೆ ಕಂಗೆಟ್ಟಿದ್ದೇವೆ ಎಂಬುದು ಗ್ರಾಮಸ್ಥರ ಮಾತು.ಈ ಬಗ್ಗೆ ಸಂಬಂಧಪಟ್ಟವರು ರಸ್ತೆಯ ಅಂಚುಗಳಲ್ಲಿ ದಾರಿದೀಪದ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Kshetra Samachara
13/09/2021 02:35 pm