ಮುಲ್ಕಿ: ಕಿನ್ನಿಗೋಳಿ ಮುಲ್ಕಿಯ ರಾಜ್ಯ ಹೆದ್ದಾರಿ ಪದ್ಮನೂರು ಅಪಾಯಕಾರಿ ತಿರುವಿನಲ್ಲಿ ಭಾರಿ ಗಾತ್ರದ ಹೊಂಡಕ್ಕೆ ಹಾಕಿದ ಕಾಂಕ್ರೀಟ್ ಸ್ಲಾಬ್ ಕಿತ್ತುಹೋಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಳೆದ ವರ್ಷದ ಮಳೆಗಾಲದಲ್ಲಿ ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಕೆಲ ಲಾರಿ ಮಾಲೀಕರು ಹೊಂಡಗಳಿಗೆ ಸಿಮೆಂಟಿನ ಕಾಂಕ್ರೀಟ್ ಸ್ಲಾಬ್ ಹಾಕಿ ತಾತ್ಕಾಲಿಕ ದುರಸ್ತಿ ಪಡಿಸಿದ್ದರು.
ಆದರೆ ಈ ಬಾರಿ ಸುರಿದ ಭಾರಿ ಮಳೆಗೆ ಪದ್ಮನೂರು ಬಳಿಯ ರಾಜ್ಯ ಹೆದ್ದಾರಿ ಅಪಾಯಕಾರಿ ತಿರುವಿನಲ್ಲಿ ಹಾಕಿದ್ದ ಸಿಮೆಂಟಿನ ಕಾಂಕ್ರೀಟ್ ಸ್ಲಾಬ್ ಕಿತ್ತು ಹೋಗಿದ್ದು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.
ಕಿನ್ನಿಗೋಳಿ ಮೂಡಬಿದ್ರೆ ಕಟೀಲು ಮುಲ್ಕಿ ರಾಜ್ಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಚರಂಡಿ ವ್ಯವಸ್ಥೆ ಇಲ್ಲದೆ ಡಾಮರೀಕರಣ ನಾಶವಾಗುತ್ತಿದೆ.
ಈ ಬಗ್ಗೆ ಅನೇಕ ಬಾರಿ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರೂ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತಿಲ್ಲ. ಅಪಾಯ ಸಂಭವಿಸುವ ಮೊದಲೇ ಪದ್ಮನೂರು ಹಾಗೂ ಎಸ್. ಕೋಡಿ ಹೆದ್ದಾರಿಯಲ್ಲಿ ಅಪಾಯಕಾರಿ ಹೊಂಡಗಳನ್ನು ದುರಸ್ತಿ ಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
02/09/2021 12:04 pm