ಮಂಗಳೂರು: ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಕಾಲದ ಕಟ್ಟಡ ಬಂದರು ಪೊಲೀಸ್ ಠಾಣೆಯು ಸುಣ್ಣ-ಬಣ್ಣ ಬಳಿದುಕೊಂಡು ಮೆರುಗುಗೊಂಡಿದೆ. ಈ ಕಟ್ಟಡ 132 ವರ್ಷಗಳಷ್ಟು ಪುರಾತನವಾಗಿದ್ದೆಂದು ದಾಖಲೆಗಳಲ್ಲಿದ್ದು, 1889ರಲ್ಲಿ ಸುಮಾರು 16,000 ರೂ.ಗಳೊಂದಿಗೆ ಈ ಕಟ್ಟಡ ನಿರ್ಮಾಣವಾಗಿತ್ತು ಎಂದು ತಿಳಿದು ಬಂದಿದೆ.
ಬ್ರಿಟಿಷ್ ಕಾಲದಲ್ಲಿಯೇ ನಿರ್ಮಾಣವಾಗಿರುವ ಈ ಕಟ್ಟಡವು ಈಗಲೂ ಸುಸ್ಥಿತಿಯಲ್ಲಿದೆ. ಅಲ್ಲದೆ ಪುರಾತನ ವಾಸ್ತುಶಿಲ್ಪದೊಂದಿಗೆ ಪಾರಂಪರಿಕತೆಯ ಮೆರುಗನ್ನು ಮೈಗೂಡಿಸಿಕೊಂಡಿದೆ. ಕಟ್ಟಡದ ಮೇಲ್ಛಾವಣಿ, ಬಾಗಿಲುಗಳು ಸದೃಢ ಮರಮಟ್ಟುಗಳಿಂದ ಕೂಡಿದೆ. ಪುರಾತನ ಸರಕಾರಿ ಕಟ್ಟಡದ ನೋಟವನ್ನು ನೀಡುತ್ತದೆ. ಈ ಠಾಣೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಪಾರಂಪರಿಕ ಕಟ್ಟಡವನ್ನು ಪ್ರವೇಶಿಸಿದ ಭಾಸವಾಗುತ್ತದೆ.
ಕಳೆದ ಹಲವಾರು ವರ್ಷಗಳಿಂದ ಬಣ್ಣ ಮಾಸಿದ್ದ ಈ ಪೊಲೀಸ್ ಠಾಣೆಯ ಕಟ್ಟಡವು ಸುತ್ತಮುತ್ತ ಹಳೆಯ ವಾಹನಗಳೊಂದಿಗೆ ನಾದುರಸ್ತಿಯಲ್ಲಿತ್ತು. ಆಗ ಠಾಣೆಯ ಹಿಂದಿನ ಪೊಲೀಸ್ ನಿರೀಕ್ಷ ಗೋವಿಂದ ಬಿ. ನೇತೃತ್ವದಲ್ಲಿ ಸಾಕಷ್ಟು ನವೀಕರಣ ಕಾರ್ಯ ನಡೆಸಲಾಗಿದೆ. ಪ್ರಸಕ್ತ ರಾಘವೇಂದ್ರ ಎಂ. ಬೈಂದೂರು ಈ ಠಾಣೆಯ ಇನ್ ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2 ಮಹಡಿಗಳು, ಹೆಂಚಿನ ಮೇಲ್ಛಾವಣಿಯೊಂದಿಗೆ 10ಕ್ಕೂ ಅಧಿಕ ಕೊಠಡಿಗಳನ್ನು ಹೊಂದಿರುವ ಈ ಪೊಲೀಸ್ ಠಾಣೆಯು 67 ಸೆಂಟ್ಸ್ ಭೂಮಿಯನ್ನು ಹೊಂದಿದೆ. ಠಾಣೆಯ ಹೊರ ಆವರಣದಲ್ಲಿ ಎಸಿಪಿ (ಸೆಂಟ್ರಲ್ ) ಕಚೇರಿಯೂ ಇದೆ. ಹಳೆ ಠಾಣಾ ಕಟ್ಟಡದ ಎಡ ಪಾರ್ಶ್ವದಲ್ಲಿ ಇಂಟರೋಗೇಶನ್ (ವಿಚಾರಣಾ) ವಿಭಾಗವಿದ್ದು, ಇದು ಹೊಸತಾಗಿ ಕೆಲ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವುದಾಗಿದೆ.
ಇಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಡಿಸಿಪಿಗಳಾದ ಹರಿರಾಂ ಶಂಕರ್ ಹಾಗೂ ದಿನೇಶ್ ಕುಮಾರ್ ಜತೆ ಮಂಗಳೂರು ನಗರ ಉತ್ತರ ಠಾಣೆಗೆ ಭೇಟಿ ನೀಡಿ ಕಟ್ಟಡದ ನವೀಕರಣವನ್ನು ಪರಿಶೀಲಿಸಿದರು.
Kshetra Samachara
25/08/2021 09:44 pm