ಉಡುಪಿ: ಉಡುಪಿಯ ಕಲ್ಸಂಕ ರಾಷ್ಟ್ರೀಯ ಹೆದ್ದಾರಿ ಬಳಿ, ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಜಲ್ಲಿಕಲ್ಲುಗಳೆಲ್ಲ ಕಿತ್ತುಹೋಗಿದ್ದು, ರಸ್ತೆಯ ಒಳಗಿದ್ದ ಕಬ್ಬಿಣದ ಸರಳುಗಳು ಮೇಲೆದ್ದು ಅಪಾಯ ಆಹ್ವಾನಿಸುತ್ತಿವೆ.
ಕಳಪೆ ಮಟ್ಟದ ಕಾಮಗಾರಿಯಿಂದಾಗಿ ಈ ಸಮಸ್ಯೆ ಉದ್ಭವಿಸಲು ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮುಖ್ಯ ರಸ್ತೆಯಲ್ಲಿ ಮುಂಜಾವ ವಾಯು ವಿಹಾರಿಗಳು, ಯಾತ್ರಿಕರು, ಪಾದಚಾರಿಗಳು, ಸಂಚರಿಸುತ್ತಿರುತ್ತಾರೆ. ಕಂಬಿಗಳು ಕಾಲಿಗೆ ತಾಗಿ ಪಾದಚಾರಿಗಳು ಎಡವಿ ಬಿದ್ದು ಗಾಯಾಳುಗಳಾದ ಹಲವು ಘಟನೆಗಳು ಇಲ್ಲಿ ನಡೆದಿವೆ.
ನಗರಾಡಳಿತ ತಕ್ಷಣ ದುರಂತ ಆಹ್ವಾನಿಸುವ ಸ್ಥಳದಲ್ಲಿರುವ ಕಬ್ಬಿಣದ ಸರಳುಗಳನ್ನು ಕತ್ತರಿಸುವಂತೆ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.
Kshetra Samachara
21/02/2021 10:53 am