ಕುಂದಾಪುರ: ಕಳೆದ ಮೂರು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಈ ನಡುವೆ ಹೆದ್ದಾರಿಯಲ್ಲಿನ ದಾರಿ ದೀಪಗಳಿಗೆ ಸಂಪರ್ಕಿಸಲಾದ ವಿದ್ಯುತ್ ಹೆದ್ದಾರಿ ಮೇಲೆ ಪ್ರವಹಿಸಿರುವುದನ್ನು ಟೆಸ್ಟರ್ ಮೂಲಕ ತೋರಿಸಿದ ವಿಡಿಯೋವೊಂದು ವೈರಲ್ಲಾಗಿ ಆತಂಕಕ್ಕೀಡು ಮಾಡಿದೆ. ಈ ಘಟನೆ ಕುಂದಾಪುರದ ಹೃದಯಭಾಗದಲ್ಲಿರುವ ಫ್ಲೈ ಓವರ್‌ನಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಇಬ್ಬರು ವ್ಯಕ್ತಿಗಳು ಈ ಪ್ರಾತ್ಯಕ್ಷಿಕೆ ಮಾಡಿ, ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನವಯುಗ ಕನ್‌ಸ್ಟ್ರಕ್ಷನ್‌ನವರು ಹಲವಾರು ಸಮಸ್ಯೆಗಳ ನಡುವೆಯೇ ಫ್ಲೈ ಓವರ್ ನಿರ್ಮಿಸಿದ್ದರೂ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಳಿಕವೂ ದಾರಿದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ. ಸಾರ್ವಜನಿಕರ ಹೋರಾಟದ ಬಳಿಕ ತರಾತುರಿಯಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ವಿದ್ಯುತ್ ಸಂಪರ್ಕ ನೀಡಲಾಗಿತ್ತು.
ಇದೀಗ ವಿದ್ಯುತ್ ಸಂಪರ್ಕದಲ್ಲಿನ ಸಮಸ್ಯೆಯಿಂದಾಗಿ ಫ್ಲೈ ಓವರ್ ಮೇಲೆ ವಿದ್ಯುತ್ ಪ್ರವಹಿಸುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಗಮನಹರಿಸಿ, ಸಮಸ್ಯೆ ಪರಿಹರಿಸಬೇಕಾಗಿದೆ.
ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್, ಕುಂದಾಪುರ
PublicNext
24/08/2022 08:22 am