ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಕುಮಾರಮಂಗಿಲ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗುವ ರಸ್ತೆ ಕೆಟ್ಟು ಹೋಗಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ಮುಲ್ಕಿ ಪರಿಸರದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ದೇವಸ್ಥಾನದ ಪರಿಸರದಲ್ಲಿ ಕೃತಕ ನೆರೆ ಉಂಟಾಗಿ ರಸ್ತೆ ಮುಳುಗಿದ್ದು ದೇವಸ್ಥಾನಕ್ಕೆ ಬರುವ ಭಕ್ತರು ಅದರಲ್ಲೂ ವೃದ್ಧರು, ಮಗುವನ್ನು ಹಿಡಿದುಕೊಂಡು ಬಂದ ಮಹಿಳೆಯರು ಜೀವವನ್ನು ಕೈಯಲ್ಲಿ ಹಿಡಿದು ನಡೆದಾಡಬೇಕಾದ ಪರಿಸ್ಥಿತಿ ಬಂತು.
ಕಳೆದ ಹಲವಾರು ವರ್ಷಗಳ ಇತಿಹಾಸವಿರುವ ಕುಮಾರ ಮಂಗಿಲ ದೇವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವ ನಡೆದಿದ್ದು ದೇವಸ್ಥಾನದ ಹೊರಭಾಗದಲ್ಲಿ ಬರುವ ರಸ್ತೆಯ ಇಕ್ಕೆಲಗಳಲ್ಲಿ ಗದ್ದೆಗಳಿದ್ದು ಪ್ರತಿ ಮಳೆಗಾಲದಲ್ಲಿ ನೆರೆಯಿಂದ ಬೆಳೆ ಹಾನಿ ಹಾಗೂ ರಸ್ತೆ ಮುಳುಗಡೆಯಾಗಿ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ ಅರ್ಧಂಬರ್ಧ ಡಾಂಬರೀಕರಣ ನಡೆದಿದ್ದು ಸಂಚಾರ ದುಸ್ತರವಾಗಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆ ಈ ಈ ಭಾಗದ ಜನರ ಬಹು ಬೇಡಿಕೆಯಾದ ರಸ್ತೆ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕು ಎಂದು ಅವಿಭಾಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಒತ್ತಾಯಿಸಿದ್ದಾರೆ.
Kshetra Samachara
02/08/2022 09:36 pm