ಮುಲ್ಕಿ: ಮುಲ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಂದ ಎಡೆಬಿಡದೆ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ ಅರ್ಧಂಬರ್ಧ ಕಾಮಗಾರಿಯಿಂದ ಕೃತಕ ನೆರೆಯಾಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ಹಾಗೂ ಕಿನ್ನಿಗೋಳಿ ಕಡೆಗೆ ಹೋಗುವ ಒಳ ರಸ್ತೆ ಕೆರೆಯಂತಾಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಪ್ರತೀ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ನೀರು ನಿಲ್ಲುತ್ತಿದ್ದರೂ ಇಲಾಖೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಲ್ಕಿ ಹೆದ್ದಾರಿ ಕ್ಷೀರಸಾಗರದ ಬಳಿ ಹೆದ್ದಾರಿ ಇಲಾಖೆ ಅರ್ಧಂಬರ್ಧ ಕಾಮಗಾರಿಯಿಂದ ಭಾರಿ ಗಾತ್ರದ ಹೊಂಡ ಉಂಟಾಗಿ ಮಳೆ ನೀರು ನಿಂತು ಅಪಾಯವನ್ನು ಆಹ್ವಾನಿಸುತ್ತಿದೆ.
ಒಟ್ಟಾರೆಯಾಗಿ ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಕಿನ್ನಿಗೋಳಿ-ಹಳೆಯಂಗಡಿ ಪಕ್ಷಿಕೆರೆ ಪಡು ಪಣಂಬೂರು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಕಟ್ಟೆಚ್ಚರದಿಂದ ಇರಲು ಮುಲ್ಕಿ ತಹಶಿಲ್ದಾರ್ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Kshetra Samachara
19/05/2022 04:32 pm